ವ್ಯಕ್ತಿತ್ವ ವಿಕಾಸದಿಂದ ಭ್ರಷ್ಟಾಚಾರ ನಿರ್ಮೂಲನೆ

ಬೀದರ:ನ.6: ವ್ಯಕ್ತಿತ್ವ ವಿಕಾಸದಿಂದ ದೇಶದಲ್ಲಿನ ಭ್ರಷ್ಟಾಚಾರ ತೊಲಗಲು ಸಾಧ್ಯವಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ತಿಳಿಸಿದರು.

ಇತ್ತಿಚೀಗೆ ತಾಲೂಕಿನ ಅಲಿಯಂಬರ್ ಗ್ರಾಮದ ಸರಕಾರಿ ಪ್ರೌಢಶಾಲೆ ಅವರಣದಲ್ಲಿ ಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ ಬೀದರ್ ಮತ್ತು ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದರು.

ನೆಹರು ಯುವ ಕೇಂದ್ರ ಯುವಜನರಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಸ್ವಾಭಿಮಾನ ಹಾಗೂ ಸಹೋದರತ್ವ ಕಲಿಸಿಕೊಡುತ್ತಿದ್ದು ಜಿಲ್ಲೆಯ ಯುವ ಸಂಘ, ಸಂಸ್ಥೆಗಳು ಇಲಾಖೆ ಹಾಗೂ ಸಾರ್ವಜನಿಕರ ಮಧ್ಯದ ಕೊಂಡಿಯಾಗಿ ಕಾರ್ಯ ಮಾಡುವಂತೆ ಹೇಳಿದರು.

ಸಮಾರಂಭ ಉದ್ಘಾಟಿಸಿದ ಸ್ಥಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮಾತನಾಡಿ, ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮುಲನೆ ಮಾಡುವಲ್ಲಿ ಸಂಘ, ಸಂಸ್ಥೆಗಳ ಪಾತ್ರ ಹಿರಿದಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮತ್ತು ಭ್ರಷ್ಟರಿಗೆ ಬಿಸಿ ಮುಟ್ಟಿಸುವ ಕಾರ್ಯ ಯುವಶಕ್ತಿಯಿಂದ ಮಾತ್ರ ಸಾಧ್ಯ ಎಂದರು.

ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಗಲಾ ಮರಕಲೆ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯ ಗುರು ರಾಜಕುಮಾರ ಜನವಾಡಕರ್ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ತಾಲೂಕಿನ ವಿವಿಧ ಗ್ರಾಮಗಳ ಯುವಕ, ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.