ವ್ಯಕ್ತಿತ್ವ ವಿಕಸನಕ್ಕೆ ಸಮಾಜಕಾರ್ಯ ಸಹಕಾರಿ

ಕಲಬುರಗಿ:ಆ.9: ಬಸವ ಮತ್ತು ಅನನ್ಯ ಸಮಾಜಕಾರ್ಯ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ದೇವನ ತೆಗನೂರ ಗ್ರಾಮದಲ್ಲಿ ಹಮ್ಮಿಕೊಂಡ ಸಮಾಜಕಾರ್ಯ ಶಿಬಿರವನ್ನು ಶಿವಯೋಗೆಶ್ವರ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷರಾದ ವಿಶ್ವನಾಥಗೌಡ ಅಫ್ಜಲ್‍ಪುರಕರ್ ಉದ್ಘಾಟಿಸಿದರು. ಸಮಾಜಕಾರ್ಯ ಶಿಬಿರವನ್ನು ದೇವನತೆಗನೂರು ಗ್ರಾಮದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರಾಜಶ್ರೀ ಚಿಟಗುಪ್ಪಕರ್‍ರವರು ಅಲಂಕರಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಇನರ್‍ವಿಲ್ ಕ್ಲಬ್ ಅಧ್ಯಕ್ಷರಾದ ಶ್ರೀ ಶೇಷಾದ್ರಿ ಕುಲಕರ್ಣಿ ಅವರು ಅಲಂಕರಿಸಿದ್ದರು. ವಿಶ್ವನಾಥಗೌಡ ಅಫ್ಜಲ್‍ಪುರಕರ್ ಸಮಾಜ ಕಾರ್ಯದ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಷ್ಠೆಯಿಂದ ಅಭ್ಯಾಸ ಮಾಡುವ ಜೊತೆಗೆ ನೈತಿಕ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಜೀವನ ಸಾಗಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಸಮಾಜಕಾರ್ಯ ಸಹಕಾರಿ ಎಂದು ಹೇಳಿದರು. ಅನನ್ಯ ಸಮಾಜಕಾರ್ಯ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶರಣು ಹೊನ್ನಗೆಜ್ಜಿ ಮಾತನಾಡಿದರು. ಇನರ್‍ವಿಲ್ ಕ್ಲಬ್ ಅಧ್ಯಕ್ಷರಾದ ಶ್ರೀ ಶೇಷಾದ್ರಿ ಕುಲಕರ್ಣಿ ಅವರು ಮಾತನಾಡಿ, ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಕುಲಂಕುಷವಾಗಿ ಅರ್ಥಮಾಡಿಕೊಂಡು ಸರಿದಾರಿಯಲ್ಲಿ ಸಾಗಬೇಕಾದ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಹೇಳಿದರು. ಈ ಸಮಾರಂಭಕ್ಕೆ ಅತಿಥಿಗಳಾಗಿ ಶ್ರೀ ಸೋಮಶೇಖರ್ ಮಕಾಶಿ, ಸಿದ್ದಲಿಂಗಶೆಟ್ಟಿ ಶಿರವಾಳ, ಶ್ರೀದೇವಿ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು. ಸಮಾಜಕಾರ್ಯ ಶಿಬಿರಾರ್ಥಿಗಳು ಮತ್ತು ದೇವನತೆಗನೂರು ಗ್ರಾಮಸ್ಥರು ಹಾಜರಿದ್ದರು.