ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ

ಕೆ.ಆರ್.ಪೇಟೆ.ಮಾ.17: ಆಟದ ಮೈದಾನಗಳು ನಮ್ಮ ಪ್ರಗತಿಯ ಸಂಕೇತವಾಗಬೇಕು. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಸುಸಜ್ಜಿತ ಆಟದ ಮೈದಾನಗಳು ನಿರ್ಮಾಣವಾಗಬೇಕೆಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದ ಆವರಣದಲ್ಲಿ ರಾಜ್ಯ ಕ್ರೀಡಾ ಇಲಾಖೆಯ ವತಿಯಿಂದ ನಿರ್ಮಿಸಿರುವ ಜಗದ್ಗುರು ಡಾ. ಬಾಲಗಂಗಾಧರನಾಥಸ್ವಾಮಿ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾವೆಲ್ಲರೂ ವೃತ್ತಿಪರ ಕ್ರೀಡಾಪಟುಗಳಾಗದಿದ್ದರೂ ಕ್ರೀಡೆಯನ್ನು ನಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಬೇಕು. ಮಕ್ಕಳು ದುಶ್ಚಟದಿಂದ ದೂರವಾಗಬೇಕಾದರೆ, ನಮ್ಮ ಮಕ್ಕಳು ಮೊಬೈಲ್ ಸಂಸ್ಕೃತಿಯಿಂದ ಹೊರಬರಬೇಕಾದರೆ ಕ್ರೀಡೆ ನೆರವಾಗಲಿದೆ. ಎಲ್ಲಾ ಜಾತಿ, ಧರ್ಮಗಳನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ.
ಕ್ರೀಡೆ ನಮ್ಮ ಬದಲಾವಣೆಗೆ ಬಹುದೊಡ್ಡ ಶಕ್ತಿ. ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯುತ್ತದೆಂದು ಅಭಿಪ್ರಾಯಪಟ್ಟರು ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದು ಅವುಗಳ ಪುನರುತ್ಥಾನವಾಗಬೇಕು. ನಮ್ಮ ಸಮಾಜ ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದುದು. ನಾವು ಸಂಪಾಧಿಸಿದ ಹಣ ನಮ್ಮಲ್ಲಿಯೇ ಉಳಿಯಬೇಕು. ನಮ್ಮ ಕುಟುಂಬದ ಜೊತೆಯಲ್ಲಿಯೇ ನಾವು ಬದುಕಬೇಕು. ಬದುಕಿನ ಶಿಸ್ತು ನಮಗೆ ಕ್ರೀಡೆಯಿಂದ ದೊರಕುತ್ತದೆಂದರು.
ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಗೆ ಸಂವೃದ್ದಿ ಮತ್ತು ಹೊಸತನಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ನಾವು ಅಭಿವೃದ್ದಿ ಪಥದ ದಾಪುಗಾಲು ಹಾಕಬೇಕಾಗಿದೆ. ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಬೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಕೊಡುಗೆ ಅಪಾರ. ಅವರ ದಾರಿಯಲ್ಲಿಯೇ ಡಾ.ನಿರ್ಮಲಾನಂದನಾಥ ಶ್ರೀಗಳು ಸಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಕೊರತೆಯನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ನೀಗಿಸುತ್ತಿದೆ.
ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ಪಟ್ಟಣದ ಒಳಾಂಗಣ ಕ್ರೀಡಾಂಗಣಕ್ಕೆ ಬಾಲಗಂಗಾಧರನಾಥ ಶ್ರೀಗಳ ಹೆಸರನ್ನಿಡುವ ಮೂಲಕ ಗೌರವ ಸಮರ್ಪಣೆ ಮಾಡುತ್ತಿದೆ. ಕೆ.ಆರ್.ಪೇಟೆಯಂತಹ ಪುಟ್ಟ ಪಟ್ಟಣದಲ್ಲಿ ವಿಶ್ವ ದರ್ಜೆಯ ಹೈಟೆಕ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದ್ದು ಈ ಭಾಗದ ಯುವಕರ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಇದು ನೆರವಾಗಲಿದೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ ಪಟ್ಟಣದಲ್ಲಿ ಹೈಟೆಕ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಕಾರಣಕರ್ತರಾದ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡರ ಕಾರ್ಯವನ್ನು ಶ್ಲಾಘಿಸಿದರು. ಭಾರತ ದೇಶದಲ್ಲಿ ಉತ್ತಮ ಕ್ರೀಡಾ ಪೆÇ್ರೀತ್ಸಾಹಕರಿದ್ದಾರೆ. ಆದರೆ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರ ಭಾರತೀಯರು ಹಿಂದುಳಿದಿದ್ದಾರೆ ಎನ್ನುವ ಕ್ರಿಕೆಟ್ಟಿಗ ಸಚಿನ್ ತೆಂಡೂಲ್ಕೂರ್ ಅವರ ಮಾತನ್ನು ಉಲ್ಲೇಕಿಸಿದ ಶ್ರೀಗಳು 140 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಉತ್ತಮ ಕ್ರೀಡಾಪಟುಗಳ ಕೊರತೆಯಿದೆ. ಇತ್ತೀಚೆಗೆ ಕ್ರೀಡಾ ಚಟುವಟಿಕೆಗಳಿಗೆ ಒಂದಷ್ಟು ಪೆÇ್ರೀತ್ಸಾಹ ದೊರಕುತ್ತಿದೆ. ತಾಲೂಕು ಮಟ್ಟದಲ್ಲಿಯೂ ವಿಶ್ವ ದರ್ಜೆಯ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಒಲಂಪಿಕ್ಸ್ ಪದಕ ಗಳಿಸುವತ್ತ ಮುನ್ನುಗುತ್ತಾರೆ ಎನ್ನುವ ಆಸಾಭಾವನೆಯನ್ನು ವ್ಯಕ್ತಪಡಿಸಿದರು. ಬದುಕಿಗೆ ಭೌತಿಕತೆಯ ಜೊತೆಗೆ ಒಂದಷ್ಟು ಆದ್ಯಾತ್ಮಿಕತೆಯಿರಬೇಕೆಂದ ಚುಂಚಶ್ರೀಗಳು ನಮ್ಮ ಶರೀರ ಆರೋಗ್ಯಕರವಾಗಿದ್ದರೆ ಮಾತ್ರ ನಾವು ಬದುಕನ್ನು ಅನುಭವಿಸಲು ಸಾಧ್ಯ. ಕ್ರೀಡೆ ನಮ್ಮ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರಲ್ಲದೆ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶಕ್ಕೆ ಎಂಜಿನಿಯರಿಂಗ್ ಕಾಲೇಜುಗಳು ಬಂದವು.
ಪಟ್ಟಣಕ್ಕೆ ಇಂಜಿನಿಯರಿಂಗ್ ಕಾಲೇಜು ತರುವಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರ ಪರಿಶ್ರಮಿದ್ದು ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಕೃಷ್ಣ ಅವರ ಹೆಸರನ್ನಿಟ್ಟಿರುವುದು ಸ್ವಾಗತಾರ್ಹವೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಕೊಡುಗೆಗಳನ್ನು ವಿವರಿಸಿದರು. ತಾಲೂಕಿನ ಸಂತೇಬಾಚಹಲ್ಳಿ, ಬೂಕನಕೆರೆ, ಶಿಳನೆರೆ ಮತ್ತು ಅಕ್ಕಿಹೆಬ್ಬಳು ಹೋಬಳಿಗಳ ಕೆರೆಗೆ ಹೇಮಾವತಿ ನೀರು ಹರಿಸಲು ರೂಪಿಸಿರುವ ಏತ ನೀರಾವರಿ ಯೋಜನೆಗಳು, ಜಲಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶಕ್ಕೆ ಶುದ್ದ ಕುಡಿಯುವ ನೀರು ಮುಂತಾದವುಗಳನ್ನು ಪ್ರಸ್ತಾಪಿಸಿದ ಸಚಿವ ಕೆ.ಸಿ.ಎನ್ ತಾಲೂಕಿನ ಎಲ್ಲಾ ಕೆರೆಗಳನ್ನು ಹೇಮೆಯ ನೀರಿನಿಂದ ತುಂಬಿಸುವ ಕನಸು ಮಾಜಿ ಸ್ಪೀಕರ್ ಕೃಷ್ಣ ಅವರಿಗಿತ್ತು. ಕೃಷ್ಣ ಅವರ 40 ವರ್ಷಗಳ ರಾಜಕೀಯ ಜೀವನದ ಕನಸನ್ನು ನಾನು ನನಸು ಮಾಡಿದ್ದೇನೆಂದರು.
ಇದೇ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರ ಆತ್ಮ ಚರಿತ್ರೆ “ಅಂತರಾಳದ ಮಾತು” ಕೃತಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಕೊಮ್ಮೇರಹಳ್ಳಿ ಆದಿ ಚುಛಮನಗಿರಿ ವಿಶ್ವ ಮಾನವ ಸಂಸ್ಥೆಯ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಕೃಷ್ಣ ಅವರ ಪತ್ನಿ ನಿವೃತ್ತ ಪೆÇ್ರೀ. ಇಂದಿರಮ್ಮ, ರಾಜ್ಯ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿರಜನೀಶ್, ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾ ಹುಲ್ಮನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಎನ್.ಯತೀಶ್, ರಾಜ್ಯ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಮಹದೇವಿ, ಉಪಾಧ್ಯಕ್ಷೆ ಗಾಯಿತ್ರಿ, ಸದಸ್ಯ ಹೆಚ್.ಎನ್.ಪ್ರವೀಣ್, ಜಿ.ಪಂ ಮಾಜಿ ಸದಸ್ಯರಾದ ಶೀಳನೆರೆ ಅಂಬರೀಶ್, ಕಿಕ್ಕೇರಿ ಪ್ರಭಾಕರ್, ರೈತ ಮುಖಂಡ ಕೆ.ಆರ್.ಜಯರಾಂ ಸೇರಿದಂತೆ ಹಲವು ಸ್ಥಳೀಯ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರು ವೇದಿಕೆಯಲ್ಲಿದ್ದರು.