ವ್ಯಕ್ತಿತ್ವ ನಿರ್ಮಾಣದಲ್ಲಿ ಕನ್ನಡ ಭಾಷೆ ಮಹತ್ವದ್ದಾಗಿದೆ- ಡಾ. ರಾಜಶ್ರೀ ಕಲ್ಲೂರಕರ್

ರಾಯಚೂರು.ನ.೦೩- ವ್ಯಕ್ತಿತ್ವ ನಿರ್ಮಾಣದಲ್ಲಿ ಕನ್ನಡ ಭಾಷೆಯು ಮಹತ್ವದ್ದಾಗಿದೆ. ಅದರೊಂದಿಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಆಗ ಯಶಸ್ಸು ಖಂಡಿತ ಸಿಗುತ್ತದೆ ಎಂದು ಡಾ. ರಾಜಶ್ರೀ ಕಲ್ಲೂರಕರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ದಿ.೦೧.೧೧.೨೦೨೨ ರಂದು ಬಿ.ಅರ್.ಬಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಗಡಿನಾಡಿನಲ್ಲಿದ್ದರೂ ಕನ್ನಡ ಭಾಷೆಯನ್ನು ಸಮರ್ಥವಾಗಿ ಉಳಿಸಿಕೊಂಡಿದ್ದೇವೆ, ಬೆಳಿಸಿಕೊಂಡಿದ್ದೇವೆ. ಈ ಭಾಷೆಯ ಸತ್ವವನ್ನು ಹೀರಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕನ್ನಡ ಬರಿ ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ. ನಮ್ಮ ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಿದೆ. ಅದಕ್ಕಾಗಿ ನಾವು ಹೆಮ್ಮೆಪಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಚಾರ್ಯರಾದ ಕೆ.ಪೂಜಿತ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಐ.ಕ್ಯೂ.ಎ.ಸಿ. ಸಂಚಾಲಕರಾದ ಸಂದೀಪ ಕಾರಭಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಐಶ್ವರ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಾಗತವನ್ನು ಅಖಿಲಾ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಮಂಜುನಾಥ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.