ವ್ಯಕ್ತಿಗೆ ಹಕ್ಕುಗಳು,ಸೌಲಭ್ಯಗಳು ಸಿಗಲಿ-ಪುಟ್ಟಸ್ವಾಮಿಗೌಡ

ಗೌರಿಬಿದನೂರು, ನ.೧೪-ಸಮಾಜ ದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಪ್ರಜಾಪ್ರಭುತ್ವದ ಅಡಿಯಲ್ಲಿನ ಹಕ್ಕುಗಳು ಮತ್ತು ಸೌಲಭ್ಯಗಳು ಸಿಗುವಂತೆ ಮಾಡಿ ಅವರ ಬದುಕಿಗೆ ಆಸರೆಯಾಗಬೇಕಿದೆ ಎಂದು ಕೆ.ಎಚ್.ಪಿ ಪೌಂಡೇಷನ್ ಅಧ್ಯಕ್ಷರಾದ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲ್ಲೂಕಿನ ಮೇಲಿನ ದಿಮ್ಮಘಟ್ಟನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಸಿಳ್ಳೆಕ್ಯಾತ (ಅಲೆಮಾರಿ) ಜನಾಂಗಾಭಿವೃದ್ಧಿ ವೇದಿಕೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ದಶಕಗಳ ಹಿಂದೆ ಊರಿಂದ ಊರಿಗೆ ಸಂಚರಿಸುತ್ತಾ ತಮ್ಮ ಕುಲಕಸುಬು ಹಾಗೂ ಕೈಚಳಕದ ಮೂಲಕ ತಮ್ಮ ಬದುಕು ಸಾಗಿಸುತ್ತಿದ್ದ ಜನಾಂಗಕ್ಕೆ ಒಂದು ಭದ್ರತೆ ಹಾಗೂ ಮೀಸಲಾತಿ ಸಿಗದೆ ವಂಚಿತರಾಗಿದ್ದರು. ಅವರ ಹಿತದೃಷ್ಟಿಯಿಂದ ವೇದಿಕೆಯನ್ನು ಮಾಡಿ ಅದರಡಿಯಲ್ಲಿ ಜನಾಂಗದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಪೌಂಡೇಷನ್ ವತಿಯಿಂದ ಸಾಕಷ್ಟು ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.
ಸಿಳ್ಳೆಕ್ಯಾತ ಜನಾಂಗದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ನಾಯಕ್ ಮಾತನಾಡಿ, ಜನಾಂಗವು ರಾಜ್ಯದ ವಿವಿದೆಡೆಗಳಲ್ಲಿ ಹಂಚಿ ಹೋಗಿದ್ದು ಕೇವಲ ಕೆಲವೇ ಮಂದಿ ಮಾತ್ರ ಈ ಸಮುದಾಯದಲ್ಲಿದ್ದು, ದಶಕಗಳ ಹಿಂದೆ ತಮ್ಮ ಜೀವನೋಪಾಯಕ್ಕಾಗಿ ಹಳ್ಳಿಗಳ ಮೂಲಕ ಸಂಚರಿಸಿ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ಕಾಲಾಂತರದಲ್ಲಿ ಬದುಕಿಗೆ ನೆಲೆ ಸಿಕ್ಕಂತಹ ಸ್ಥಳದಲ್ಲಿ ನೆಲೆಸಿ ಇಂದಿಗೂ ತಮ್ಮ ವೃತ್ತಿಯನ್ನು ಹಾಗೂ ಇನ್ನಿತರ ಕಸುಬುಗಳನ್ನು ರೂಢಿಸಿಕೊಂಡಿದ್ದಾರೆ. ಸಂವಿಧಾನದ ಅಡಿಯಲ್ಲಿ ಇವರಿಗೆ ಸೂಕ್ತ ಮೀಸಲಾತಿ ದೊರೆಯದ ಕಾರಣ ಇಂದಿಗೂ ಹೋರಾಟ ಮಾಡುತ್ತಲೇ ಬರುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಜಿ.ಪಂ ಸದಸ್ಯರಾದ ಎಚ್.ವಿ.ಮಂಜುನಾಥ್, ಮುಖಂಡರಾದ ಜಿ.ಕೆ.ಸತೀಶ್, ಕೆ.ಎಸ್.ಅನಂತರಾಜು, ಶ್ರೀನಿವಾಸಗೌಡ, ಪಿ.ವಿ.ರಾಘವೇಂದ್ರ ಹನುಮಾನ್, ಸವಿತ, ಲಕ್ಷ್ಮಿ ಇತರರು ಇದ್ದರು.