ವ್ಯಕ್ತಿಗತ, ವ್ಯಕ್ತಿಗಿಂತ ಕೊರೊನಾ ವಿರುದ್ಧ ಕಾಂಗ್ರೆಸ್ ಹೋರಾಟ

ಸೋಂಕಿತರ ಉತ್ತಮ ಚಿಕಿತ್ಸೆಗೆ ರವಿ ಬೋಸರಾಜು ಸಂಘರ್ಷ
ರಾಯಚೂರು.ಮೇ.೨೦- ನವೋದಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಸಂದರ್ಭದಲ್ಲಿ ನನಗೆ ಪರಿಚಿತ ಮತ್ತು ತುರುಕನದೋಣಿ ಬಸವನಗೌಡ ಅವರಿಗೆ ಸಂಬಂಧಿಸಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಅಂದು ಮುಂಜಾನೆ ನವೋದಯ ಮುಖ್ಯಸ್ಥರಿಂದ ಆಕ್ಸಿಜನ್ ಕೊರತೆ ಮತ್ತು ತಕ್ಷಣನೇ ಸೋಂಕಿತರನ್ನು ಇಲ್ಲಿಂದ ಸ್ಥಳಾಂತರಿಸುವ ವಿಷಯ ತಿಳಿಯುತ್ತಿದ್ದಂತೆ ರವಿ ಬೋಸರಾಜು ಅವರು ಕೂಡಲೇ, ಆಕ್ಸಿಜನ್‌ಗಾಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಿ, ಈ ಸಮಸ್ಯೆ ಒಂದು ಘಂಟೆಯಲ್ಲಿ ಇತ್ಯರ್ಥಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರೆಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಅಸ್ಲಾಂ ಪಾಷಾ ಅವರು ಹೇಳಿದರು.
ನನಗೆ ದೂರವಾಣಿ ಮೂಲಕ ಮಾತನಾಡಿದ ರವಿ ಬೋಸರಾಜು ಅವರು, ತಕ್ಷಣವೇ ಚಿಕ್ಕಸೂಗೂರು ಎಂಎಸ್‌ಐಎಲ್ ಆಕ್ಸಿಜನ್ ರಿಫಿಲ್ಲಿಂಗ್ ಸೆಂಟರ್‌ಗೆ ತೆರಳುವಂತೆ ಸೂಚಿಸಿದ್ದರು. ನಾನು ಅಲ್ಲಿ ಹೋದಾಗ ಸ್ವತಃ ಔಷಧಿ ನಿಯಂತ್ರಣ ಕಛೇರಿಯ ಅಧಿಕಾರಿ ವೆಂಕಟೇಶ ರಾಥೋಡ್ ಅವರು ಇದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನವೋದಯಕ್ಕೆ ಆಕ್ಸಿಜನ್ ಪೂರೈಕೆಯ ಪ್ರಕ್ರಿಯೆ ನಡೆದಿತ್ತು. ಇವೆಲ್ಲವೂ ರವಿ ಬೋಸರಾಜು ಅವರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಕುಂತ ನಂತರ ನಡೆದ ಘಟನೆ ಎನ್ನುವುದು ಮರೆಯುವಂತಿಲ್ಲ.
ನಾನು ಸ್ವತಃ ೧೩ ಖಾಲಿ ಸಿಲಿಂಡರ್ ಚಿಕ್ಕಸೂಗೂರು ರಿಫಿಲ್ಲಿಂಗ್ ಸೆಂಟರ್‌ಗೆ ಕೊಂಡೊಯ್ದಿದ್ದೆ. ಈ ತುರ್ತು ಚಟುವಟಿಕೆ ಹಿನ್ನೆಲೆಯಲ್ಲಿ ನವೋದಯ ಸೇರಿದಂತೆ ಇತರೆ ಮೂರು ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿತ್ತು. ಈ ಕುರಿತು ಶಾಸಕರು ತಕ್ಷಣವೇ ಸ್ಪಂದಿಸಬೇಕಾಗಿತ್ತು. ಆದರೆ, ಇವಱ್ಯಾರು ಸ್ಪಂದಿಸದ ಕಾರಣ ರವಿ ಅವರು ಕೊರೊನಾ ಸೋಂಕಿತರ ಹಿತಕ್ಕಾಗಿ ಮುಂದಾಗಬೇಕಾಯಿತು. ಕಾಂಗ್ರೆಸ್ ಪಕ್ಷ ಕೊರೊನಾ ಸಂದರ್ಭದಲ್ಲಿ ವ್ಯಕ್ತಿಗತ ಮತ್ತು ವ್ಯಕ್ತಿಯ ವಿರುದ್ಧ ಹೋರಾಡುವುದಿಲ್ಲ. ಕೇವಲ ಕೊರೊನಾ ರೋಗದ ವಿರುದ್ಧ ಹೋರಾಡುತ್ತಿದೆ. ರಾಜಕೀಯ ಮಾಡುವ ಉದ್ದೇಶವೂ ನಮಗಿಲ್ಲ.
ಅಂದು ನಮ್ಮ ಮುಂದೆ ಹೇಗಾದರೂ ಮಾಡಿ ಆಕ್ಸಿಜನ್ ಕೊರತೆಯ ಸೋಂಕಿತರಿಗೆ ತಕ್ಷಣವೇ ಆಕ್ಸಿಜನ್ ಪೂರೈಸುವ ಏಕಮಾತ್ರ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಒಂದೆಡೆ ಕಾಂಗ್ರೆಸ್ಸಿನ ಕಾರ್ಯಕರ್ತರು ಜಂಬೋ ಸಿಲಿಂಡರ್ ಆಟೋದಲ್ಲಿ ತಲುಪಿಸಿದರೇ, ಮತ್ತೊಂದೆಡೆ ಅಧಿಕಾರಿಗಳ ಮೂಲಕ ಆಕ್ಸಿಜನ್ ಸಿಲಿಂಡರ್ ನವೋದಯ ತಲುಪುವಂತೆ ಮಾಡಲಾಯಿತು. ಇದರಲ್ಲಿ ರಾಜಕೀಯ ಏನು ಬಂತು?. ಜನರ ಪ್ರಾಣ ಉಳಿಸುವುದು ತಪ್ಪೇ?. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಕೇವಲ ರಾಜಕಾರಣಿಗಳು ಮಾತ್ರವಲ್ಲದೇ ಅವರೊಬ್ಬ ವೈದ್ಯರಾಗಿರುವುದರಿಂದ ಆಕ್ಸಿಜನ್ ಕೊರತೆ, ಸೋಂಕಿತರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆಂಬುವುದು ಸ್ಪಷ್ಟವಾಗಿ ಗೊತ್ತಿದೆ.
ಅವರು ಈಗಲೂ ಸಹ ಕೊರೊನಾ ಸೋಂಕಿತರ ಚಿಕಿತ್ಸೆ ಮತ್ತು ಸೌಲಭ್ಯಗಳಿಗಾಗಿ ಮುಂಚೂಣಿ ವಹಿಸಬೇಕು. ನಾವು ಅವರೊಂದಿಗೆ ನಿಲ್ಲಲು ಸಿದ್ಧರಿದ್ದೇವೆ. ನಮಗೆ ಕೊರೊನಾ ಸೋಂಕಿತರ ರಕ್ಷಣೆಗಿಂತ ಮಿಗಿಲಾದ ಮತ್ತೊಂದು ಉತ್ತಮ ಕಾರ್ಯವಿಲ್ಲ. ಇಂತಹ ಒಳ್ಳೆಯ ಕೆಲಸದಲ್ಲಿ ರಾಜಕೀಯ ಹುಡುಕುವುದನ್ನು ಬಿಟ್ಟು ಆಡಳಿತ ರೂಢ ಪಕ್ಷವಾಗಿ ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಸೋಂಕಿತರಿಗೆ ಆಕ್ಸಿಜನ್, ಔಷಧಿ ಮತ್ತು ಹಾಸಿಗೆಗಳ ಸೌಕರ್ಯ ದೊರೆಯುವಂತೆ ವ್ಯವಸ್ಥೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕು. ಅನಗತ್ಯ ಹೇಳಿಕೆ ನೀಡಿ, ಜನರನ್ನು ದಾರಿ ತಪ್ಪಿಸುವುದಲ್ಲ. ಜನರಿಗೆ ಅನುಕೂಲ ಮಾಡುವಂತೆ ಜವಾಬ್ದಾರಿ ಶಾಸಕರು ನಿರ್ವಹಿಸಬೇಕು.
ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳಲ್ಲಿ ಇಂದು ಸ್ವಚ್ಛತೆ ಸೇರಿದಂತೆ ಇತರೆ ವ್ಯವಸ್ಥೆಗಳಿಗೆ ರವಿ ಬೋಸರಾಜು ಅವರ ಒತ್ತಡವೇ ಕಾರಣವಾಗಿದೆ. ಅಲ್ಲಿಯ ಸೋಂಕಿತರಿಗೆ ಸಮಸ್ಯೆಯಾದರೇ ನೇರವಾಗಿ ರವಿ ಅವರನ್ನೇ ಸಂಪರ್ಕಿಸುತ್ತಾರೆಂದರೇ ಅವರ ಮೇಲೆ ಅಲ್ಲಿಯ ಸೋಂಕಿತರಿಗೆ ಇರುವ ನಂಬಿಕೆ ಸ್ಪಷ್ಟವಾಗುತ್ತದೆ. ರವಿ ಬೋಸರಾಜು ಅವರು ಧ್ವನಿಯೆತ್ತಿದ ನಂತರ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿದರೇ ಹೊರತು, ಅಲ್ಲಿವರೆಗೂ ಇತ್ತ ಸುಳಿದಿರಲಿಲ್ಲ. ಈಗಲೂ ನಾವು ಶಾಸಕರಿಗೆ ಎಲ್ಲಾ ರೀತಿಯ ಬೆಂಬಲ ನೀಡಲು ಸಿದ್ಧರಿದ್ದೇವೆ. ಕೊರೊನಾ ಸೋಂಕಿತರ ಹಿತಕ್ಕಾಗಿ ಅವರು ಮುಂದಾಳತ್ವ ವಹಿಸಿಕೊಳ್ಳಲಿ. ಕೊರೊನಾ ರುದ್ರಭೂಮಿಯಲ್ಲಿ ಕನಿಷ್ಟ ಸೌಲಭ್ಯ ಇಲ್ಲದಿದ್ದಾಗ ರವಿ ಬೋಸರಾಜು ಅವರು ಅಲ್ಲಿಗೆ ಭೇಟಿ ನೀಡಿ, ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದ ನಂತರ ಇಂದು ೧೦ ಲಕ್ಷ ವೆಚ್ಚದಲ್ಲಿ ರಸ್ತೆ, ಜನರಿಗೆ ಶೆಡ್ ಮತ್ತು ಜೆಸಿಬಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ರಾಜಕೀಯವೇನಿದೆಂದು, ಶಾಸಕರ ಪರ ಹೇಳಿಕೆ ನೀಡುವವರು ಉತ್ತರಿಸಬೇಕು.