ವ್ಯಂಗ್ಯ ಚಿತ್ರಗಳು ಪತ್ರಿಕೆಗಳ ಪ್ರಬಲ ಅಸ್ತ್ರ: ಎಂ. ಸಂಜೀವ್

ಕಲಬುರಗಿ,ಮೇ.05: ವ್ಯಂಗ್ಯ ಚಿತ್ರಗಳು ಪತ್ರಿಕೆಗಳ ಪ್ರಬಲ ಅಸ್ತ್ರಗಳಾಗಿದ್ದು, ಸಮಾಜದ ಸರ್ಕಾರದ ನ್ಯೂನತೆಗಳನ್ನು ಬಿಂಬಿಸಿ ಓದುಗರಲ್ಲಿ ಜಾಗೃತಿ ಮೂಡಿಸುತ್ತವೆ ಎಂದು ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಎಂ. ಸಂಜೀವ್ ಅವರು ಹೇಳಿದರು.
ನಗರದ ಜೀನಿಯಸ್ ಅಕ್ಯಾಡೆಮಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್‍ನಲ್ಲಿ ಶುಕ್ರವಾರ ವ್ಯಂಗ್ಯ ಚಿತ್ರಕಾರರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ವ್ಯಂಗ್ಯ ಚಿತ್ರ ಕುರಿತಾದ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪತ್ರಿಕೆಗಳಲ್ಲಿ ಪ್ರಕಟವಾಗುವ ವ್ಯಂಗ್ಯಚಿತ್ರಗಳು ತೀಕ್ಷಣವಾಗಿ ಜನರ ಗಮನ ಸೆಳೆಯುತ್ತವೆ. ಎನಿಮೇಶನ್ ತಂತ್ರಜಾÐನದಲ್ಲೂ ವ್ಯಂಗ್ಯ ಚಿತ್ರಕಾರರ ಮಹತ್ವವಿದ್ದು ಮನೋರಂಜನಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ವಿಠ್ಠಲ್ ಮೇತ್ರೆ ಅವರು ಮಾತನಾಡಿ, ಕಂಪ್ಯೂಟರ್ ತರಬೇತಿ ಕೇಂದ್ರ ವಿಶ್ವ ವ್ಯಂಗ್ಯ ಚಿತ್ರಕಾರದಿನ ಆಚರಿಸುತ್ತಿರುವುದು ಪ್ರಶಂಸನೀಯ ಎಂದರು. ಜೀನಿಯಸ್ ಅಕ್ಯಾಡೆಮಿ ಕೇಂದ್ರದ ಮುಖ್ಯಸ್ಥ ಶಶಿಕಾಂತ್ ಉದನೂರು ಅವರು ಅಧ್ಯಕ್ಷತೆ ವಹಿಸಿದ್ದರು.
ಅಕ್ಷತಾ ಆರ್.ಎನ್., ಅವರು ಸ್ವಾಗತಿಸಿದರು. ಎಂ.ಎಚ್. ಭುವನೇಶ್ವರಿ ಅವರು ಕಾರ್ಯಕ್ರಮ ನಿರೂಪಿಸಿದರು. ಅಪರ್ಣಾ ಜಾನೆ ಅವರು ವಂದಿಸಿದರು. ಹಿರಿಯ ಚಿತ್ರಕಲಾವಿದ ರಾಜಶೇಖರ್ ಶಾಮಣ್ಣ, ಮಹ್ಮದ್ ಅಯಾಜುದ್ದಿನ್ ಪಟೇಲ್, ಸಿ.ಎಸ್. ಮಾಲಿಪಾಟೀಲ್, ಶರಣು ಪಟ್ಟಣಶೆಟ್ಟಿ, ನಾರಾಯಣ್ ಎಂ. ಜೋಶಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.