ವೈವಿಧ್ಯತೆಯಲ್ಲಿ ಏಕತೆಯ ಅನನ್ಯ ದೇಶ ಭಾರತ-ರಾಜೇಶ್ವರಿ ಎನ್.ಹೆಗಡೆ

ಸಂಜೆವಾಣಿ ವಾರ್ತೆ

ದಾವಣಗೆರೆ. ನ.2; ಇಡೀ ಪ್ರಪಂಚದಲ್ಲಿಯೇ ವೈವಿಧ್ಯತೆಯಲ್ಲಿ ಏಕತೆಯನ್ನು ಉಳಿಸಿಕೊಂಡ ಅನನ್ಯ ದೇಶ ಭಾರತ.ಸ್ವಾತಂತ್ರ್ಯ ನಂತರವೂ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಒಗ್ಗೂಡಿಸುವಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲರ ಪರಿಶ್ರಮ ಅಪಾರವಾಗಿತ್ತು. ಭಾರತದ ಉಕ್ಕಿನ ಮನುಷ್ಯ ಎಂಬ ಕೀರ್ತಿಗೆ ಪಾತ್ರರಾದ ದೇಶದ ಪ್ರಪ್ರಥಮ ಗೃಹಸಚಿವರು,ಅಪ್ಪಟ ದೇಶಭಕ್ತರೂ ಆಗಿದ್ದ ವಲ್ಲಭಬಾಯಿ ಪಟೇಲರ ಜನ್ಮ ದಿನವನ್ನು ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯ ದಿನವನ್ನಾಗಿ ಇಂದು ಆಚರಿಸಲಾಗುತ್ತಿದೆ.ದೇಶವೆಂದರೆ ಜನ,ಮಣ್ಣು ಕೂಡ ಹೌದು.ಹಾಗಾಗಿ “ನನ್ನ ಮಣ್ಣು,ನನ್ನ ದೇಶ”ಎಂಬ ಘೋಷವಾಕ್ಯದಡಿ ಇಂದು ದೇಶದಾದ್ಯಂತ ಐಕ್ಯತಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆಯವರು ನುಡಿದರು.ರಾಷ್ಟ್ರದ ಐಕ್ಯತೆ,ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನಾವು ನೀವೆಲ್ಲರೂ ದೇಶಕ್ಕಾಗಿ ಅರ್ಪಿಸಿ ಕೊಳ್ಳೋಣ,ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ದಾವಣಗೆರೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು,ಮುಖ್ಯ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾವಿಧಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಬೋಧಿಸಿದರು.