
ಸಿರವಾರ,ಮಾ.೨೭- ವೈವಾಹಿಕ ಜೀವನದಲ್ಲಿ ಸತಿ ಪತಿಗಳಿಬ್ಬರಲ್ಲಿ ಹೊಂದಾಣಿಕೆಯಿಂದ ಇದ್ದರೆ ಜೀವನ ಸುಂದರವಾಗಿರುತ್ತದೆ. ಒಬ್ಬರ ಮನಸ್ಸನ್ನು ನೋಯಿಸದೇ, ಜೀವಿತ ಅವಧಿಯಲ್ಲಿ ಎಲ್ಲರಿಗೂ ಒಳ್ಳೆಯದನ್ನು ಬಯಸುವುದೆ ಧರ್ಮ ಎಂದು ರಾಯಚೂರು ಸೋಮವಾರಪೇಟೆ ಹಾಗೂ ಅತ್ತನೂರು ಹಿರೇಮಠದ ಅಭಿನವಶ್ರೀ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅತ್ತನೂರು ಗ್ರಾಮದಲ್ಲಿ ಶ್ರೀದಿಡ್ಡಿ ಬಸವೇಶ್ವರ ದೇವಸ್ಥಾನ ನೂತನ ಶಿಖರ ಲೋಕಾರ್ಪಣೆ, ಗಣೇಶ, ನವಗ್ರಹ ಮೂರ್ತಿಗಳ ಪ್ರತಿಷ್ಠಾನೆ, ಮೌನ ತಪ್ಪಸ್ವಿ ಲಿಂ.ಶ್ರೀ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳ ೧೯ನೇ ಪುಣ್ಯಸ್ಮರಣೆ, ಸಾಮೂಹಿಕ ವಿವಾಹ, ಧರ್ಮ ಸಭೆಯ ಸಾನಿಧ್ಯವಹಿಸಿ ತಮ್ಮ ಆಶಿರ್ವಚನದಲ್ಲಿ ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ಕಡಿಮೆಯಾಗಿ, ಬಡವರಿಗೆ ವರದಾನವಾಗಲಿದೆ, ಬಡವ-ಶ್ರೀಮಂತ ವರ್ಗದವರು ಎನ್ನದೆ ಎಲ್ಲರೂ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಿರುವದು ಉತ್ತಮ ಬೆಳವಣಿಗೆ, ಎಲ್ಲಾರೂ ಒಂದಾಗಿ ಸಾಮರಸ್ಯದಿಂದ ದೇವಸ್ಥಾನದ ಗೋಪುರು ನಿರ್ಮಾಣವಾಗಿದೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಹೆಚ್ಚು ಹೆಚ್ಚು ಈ ಗ್ರಾಮದಲ್ಲಿ ನಡೆಯಲಿ ಎಂದರು.
ಗಬ್ಬೂರು ಶ್ರೀಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಉತ್ತಮ ಕಾರ್ಯಗಳಿಗೆ ಎಲ್ಲಾರೂ ಕೈ ಜೊಡಿಸಿದರೆ ಅಸಾದ್ಯದ ಮಾತು ಎಂದು ತೊರಿಸಿಕೊಟ್ಟಿರಿ, ಸಾಮೂಹಿಕ ವಿವಾಹ ಆಗುತ್ತಿರುವುದು ಪುಣ್ಯದ ಕಾರ್ಯವಾಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರುವವರು ಸಹ ಸಾಮೂಹಿಕ ವಿವಾಹವಾದರೆ ಹೆಚ್ಚಿನವರಿಗೆ ಪ್ರೇರಣೆಯಾಗುತ್ತದೆ. ಮೆರವಣಿಗೆಗಾಗಿ ಡಿಜೆ ಹಚ್ಚಿ ದುಂದು ವೆಚ್ಚ ಮಾಡಿದರೆ ಸಾಮೂಹಿಕ ವಿವಾಹ ವಾಗಿರುವುದು ವ್ಯರ್ಥ,ಜನಿಸುವ ಮಕ್ಕಳಿಗೆ ಸಂಸ್ಕಾರ, ವಿದ್ಯಾಭ್ಯಾಸ ಕೊಡಿಸಿ ಉತ್ತಮ ಪ್ರಜೆಯನ್ನಾಗಿಸಿ ಎಂದರು.
ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಗಳ ಸಮ್ಮುಖದಲ್ಲಿ ವಿವಾಹವಾಗುತ್ತಿರುವ ನೀವು ಪುಣ್ಯವಂತರು, ದಿಡ್ಡಿ ಬಸವೇಶ್ವರ ಇಷ್ಟಾರ್ಥ ಈಡೆರಿಸುತ್ತಾರೆ. ಹಿಂದೆ ನಾನು ಸಂಸದರಾಗಿದ್ದಾಗ ಈ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಅನುದಾನ ನೀಡಿರುವೆ. ಮುಂದೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕರೆ ಇನೂ ಹೆಚ್ಚಿನ ಕೆಲಸ ಮಾಡುವೆ ಎಂದರು.
ನೀಲಗಲ್ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ರು, ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿದರು. ಈ ಸಂದರ್ಭದಲ್ಲಿ ಕಾರಲಕುಂಟಿ ಶ್ರೀಗಳು, ಬೆಟ್ಟಪ್ಪ ಪಾಟೀಲ್ ಜಿ.ಪಂ.ಸದಸ್ಯರು ಕೋಸಗಿ, ಮಾನ್ವಿ ಕ್ಷೇತ್ರದ ಸೇವಾಕಂಕ್ಷಿ ಶರಣಪ್ಪ ನಾಯಕ ಗುಡದಿನ್ನಿ,ದೇವಿಂದ್ರಪ್ಪ ಬೊಮ್ಮನಾಳ, ಬಸವರಾಜ ಪಾಟೀಲ್, ಸಣ್ಣ ಮಹಾಂತೇಶ, ವೀರಭದ್ರಪ್ಪ ಆಲ್ದಾಳ, ಗ್ರಾ.ಪಂ.ಅಧ್ಯಕ್ಷ ತಿಮ್ಮಯ್ಯ ನಾಯಕ ಹಾಗೂ ಸದಸ್ಯರು, ದೇವಸ್ಥಾನದ ಸಮಿತಿ ಅಧ್ಯಕ್ಷ ವೀರಭದ್ರಯ್ಯಸ್ವಾಮಿ, ಉಪಾಧ್ಯಕ್ಷ ನವೀನ್ ಪಾಟೀಲ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
೧೭ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಹೋಳಿಗೆ ಸವಿದ ಭಕ್ತರು:- ಸಾಮೂಹಿಕ ವಿವಾಹಕ್ಕೆ ಬಂದ ಭಕ್ತರಿಗೆ ಹೋಳಿಗೆ, ತುಪ್ಪ, ಮಜ್ಜಿಗೆ, ತರಕಾರಿ ಸ್ವಾದಿಷ್ಟ ಭೋಜನ ಮಾಡಿಸಿದ್ದು ವಿಶೇಷವಾಗಿತ್ತು.