ವೈರಲ್ ವೀಡಿಯೋಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು

ಸಂಜೆವಾಣಿ ವಾರ್ತೆ
ಮಂಡ್ಯ.ಮೇ.02:- ಪೆನ್‍ಡ್ರೈವ್ ಪ್ರಕರಣದ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಪೆನ್‍ಡ್ರೈವ್‍ಗಳ ಹಂಚಿಕೆ ಮೂಲಕ ಅಶ್ಲೀಲ ವೀಡಿಯೋಗಳನ್ನು ವೈರಲ್ ಮಾಡಿದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಿ.ಎಸ್.ಅಂಜನಾ ಶ್ರೀಕಾಂತ್ ಒತ್ತಾಯಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ಯಾವುದೇ ದೇಶದಲ್ಲಿದ್ದರೂ ಅವರನ್ನು ಪತ್ತೆ ಮಾಡಿ ಬಂಧಿಸಬೇಕು. ಪೆನ್‍ಡ್ರೈವ್ ಪ್ರಕರಣದಿಂದಾಗಿ ಹಾಸನದಲ್ಲಿ ಏನು ನಡೆಯುತ್ತಿದೆ? ಪ್ರಜಾಪ್ರಭುತ್ವ ಇದೆಯಾ? ಇಲ್ಲವೇ? ಎಂಬುದೇ ಅನುಮಾನವಾಗಿದೆ. ಒಂದು ರೀತಿಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ನಡೆಯುತ್ತಿದೆ ಅನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಐದು ವರ್ಷದ ಹಿಂದಿನಂದು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಹಾಗಿದ್ದರೆ ಪುತ್ರ ಪ್ರಜ್ವಲ್‍ನ ಈ ಅನೈತಿಕತೆ ವಿಚಾರ ರೇವಣ್ಣ ಅವರಿಗೆ ಮೊದಲೇ ತಿಳಿದಿತ್ತೆಂಬುದು ಸ್ಪಷ್ಟವಾಗಿದೆ. ಹಾಗಿದ್ದರೂ ಏಕೆ ಸುಮ್ಮನಿದ್ದರು? ಮತ್ತೆ ಚುನಾವಣೆಗೆ ಏಕೆ ನಿಲ್ಲಿಸಿದರು? ಇದೇನಾ ಮಹಿಳೆಯರಿಗೆ ಜೆಡಿಎಸ್ ಕೊಡುವ ಗೌರವ ಎಂದು ಪ್ರಶ್ನಿಸಿದರು.
ವಿಕೃತಕಾಮಿ ಮತ್ತು ಕೊಲೆಗಾರ ಉಮೇಶ್‍ರೆಡ್ಡಿಗೆ ನೀಡಿರುವಂತಹ ಶಿಕ್ಷೆಯನ್ನೇ ಸಂಸದ ಪ್ರಜ್ವಲ್ ರೇವಣ್ಣ ಅವರಿಗೂ ನೀಡಬೇಕು. ಹಾಗೆಯೇ ಪ್ರಜ್ವಲ್ ವಿರುದ್ಧ ಮನಃಸ್ಥಿತಿ ಮತ್ತು ಅವರ ಅನೈತಿಕೆಯನ್ನು ಬಯಲಿಗೆಳೆಯುವ ನೆಪದಲ್ಲಿ ಪೆನ್‍ಡ್ರೈವ್‍ಗಳ ಮೂಲಕ ಅಶ್ಲೀಲ ವೀಡಿಯೋವನ್ನು ವೈರಲ್ ಮಾಡಿ ಸಂತ್ರಸ್ತ ಹೆಣ್ಣು ಮಕ್ಕಳ ಮಾನಹರಣ ಮಾಡಲಾಗಿದೆ. ಇವರೂ ಕೂಡ ಪ್ರಜ್ವಲ್ ರೇವಣ್ಣ ಅವರಷ್ಟೇ ತಪ್ಪಿತಸ್ಥರು. ಪ್ರಜ್ವಲ್ ಮಾಡಿರುವಷ್ಟೇ ಅಪರಾಧವಾಗಿದೆ ಎಂದು ಪ್ರತಿಪಾದಿಸಿದರು.
ಸಂತ್ರಸ್ತ ಹೆಣ್ಣು ಮಕ್ಕಳಲ್ಲಿ ಮನೆಕೆಲಸದವರು, ಕ್ಲಾನ್ ಒನ್ ಅಧಿಕಾರಿಗಳಿಂದ ಡಿಗ್ರೂಪ್‍ವರೆಗಿನ ಹೆಣ್ಣು ಮಕ್ಕಳಿದ್ದಾರೆ. ಅವರೆಲ್ಲರ ಮಾನಹಾನಿಯಾಗಿದೆ. ಸಮಾಜದಲ್ಲಿ ಅವರು ತಲೆಎತ್ತಿಕೊಂಡು ತಿರುಗಾಡುವುದಾದರೂ ಹೇಗೆ? ಇದು ನಾಗರಿಕ ಸಮಾಜ ತಲೆತಗ್ಗಿಸುವ ಹಾಗೂ ನಾಚಿಕೆಗೇಡಿನ ಸಂಗತಿ. ಶತಮಾನಗಳಿಂದಲೂ ಹೆಣ್ಣು ಮಕ್ಕಳ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇದು ನಿಲ್ಲಬೇಕೆಂದು ಆಗ್ರಹಿಸಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಬಿ.ಆರ್.ಇಂದಿರಾ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ನೀಲಾಮೂರ್ತಿ, ಬೇಲೂರು ಗ್ರಾ.ಪಂ. ಅಧ್ಯಕ್ಷೆ ಸುವರ್ಣಾವತಿ, ಹೀನಾ ಕೌಸರ್, ಪದ್ಮಾಮೋಹನ್ ಗೋಷ್ಠಿಯಲ್ಲಿದ್ದರು.