ವೈರಮುಡಿ ಬ್ರಹ್ಮೋತ್ಸವ ವಿದ್ಯುಕ್ತ ಸಂಪನ್ನ

ಮೇಲುಕೋಟೆ : ಏ.08:- ಶ್ರೀಚೆಲ್ವತಿರುನಾರಾಯಣಸ್ವಾಮಿಗೆ ಶುಕ್ರವಾರ ಮಹಾಭಿಷೇಕ ನೆರವೇರುವುದರೊಂದಿಗೆ ವೈರಮುಡಿ ಬ್ರಹ್ಮೋತ್ಸವ ವಿದ್ಯುಕ್ತವಾಗಿ ಸಂಪನ್ನಗೊಂಡಿತು.
ಏಪ್ರಿಲ್ ಒಂದರ ವೈರಮುಡಿ ಕಿರೀಟಧಾರಣ ಮಹೋತ್ಸವ, ರಥೋತ್ಸವ, ತೆಪ್ಪೋತ್ಸವ ಹಾಗೂ ತೀರ್ಥಸ್ನಾನ ಮಹೋತ್ಸವ ಸೇರಿ ಒಟ್ಟಾರೆ ಹತ್ತುದಿನಗಳಕಾಲ ನಡೆದ ಎಲ್ಲ ಉತ್ಸವ ವಾಹನೋತ್ಸವಗಳಲ್ಲಿ ಐದು ಲಕ್ಷಕ್ಕೂ ಅಧಿಕ ಭಕ್ತರು ಮೇಲುಕೋಟೆಗೆ ಭೇಟಿನೀಡಿ ದರ್ಶನ ಪಡೆದಿದ್ದಾರೆ. ಮಹಾಭಿಷೇಕದ ನಿಮಿತ್ತ ಬೆಳಿಗ್ಗೆ 6 ಗಂಟೆಯಿಂದ ದೇವಾಲಯದ ಒಳಾಂಗಣವನ್ನು ನೀರಿನಿಂದ ಶುಚಿಗೊಳಿಸುವ ಕಾರ್ಯ ನಡೆಯಿತು. ನಂತರ ವೇದಮಂತ್ರದೊಂದಿಗೆ ನಾರಾಯಣಸ್ವಾಮಿ ರಾಮಾನುಜಾಚಾರ್ಯರಿಗೆ ಹಾಲು,ಜೇನು, ಮೊಸರು, ಹರಿಷಿಣ ಮುಂತಾದ ಮಂಗಳದ್ರವ್ಯಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ರಾತ್ರಿ ವಿವಿಧ ಪುಷ್ಪಗಳಿಂದ ಸ್ವಾಮಿಗೆ ಪುಷ್ಪಯಾಗ ನೆರವೇರಿಸಲಾಯಿತು. ನಂತರ ಕತ್ತಲು ಪ್ರದಕ್ಷಿಣೆಯ ಅಂಗವಾಗಿ ಮೂಲಮೂರ್ತಿಇರುವ ಒಳಪ್ರಕಾರದಲ್ಲಿ ಭಕ್ತರು ಪ್ರದಕ್ಷಿಣೆ ಮಾಡಲು ಒಂದು ಗಂಟೆಕಾಲ ಅವಕಾಶ ನೀಡಲಾಗಿತ್ತು ಇದೇ ವೇಳೆ ಚೆಲುವನಾರಾಯಣಸ್ವಾಮಿಗೆ ಹನುಮಂತವಾಹನೋತ್ಸವ ವೈಭವದಿಂದ ನೆರವೇರಿತು. ಬ್ರಹ್ಮೋತ್ಸವ ಮುಕ್ತಾಯವಾದ ಹಿನ್ನಲೆಯಲ್ಲಿ ಚಿನ್ನದದ್ವಜಸ್ಥಂಭದಿಂದ ಗರುಡದ್ವಜವನ್ನು ಇಳಿಸಿಯಥಾಸ್ಥಾನಕ್ಕೆ ಪ್ರತಿಷ್ಠಾಪಿಸಲಾಯಿತು.
ಸ್ಥಾನೀಕರಿಗೆ ಮಾಲೆಮರ್ಯಾದೆ:
ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಶ್ರಮಿಸಿದ ನಾಲ್ಕೂಮಂದಿ ಸ್ಥಾನೀಕರಿಗೆ ರಾಮಾನುಜಾಚಾರ್ಯರ ಕಾಲದಿಂದಲೂ ನಡೆದು ಬಂದ ಪರಂಪರೆಯಂತೆ ಪಟ್ಟಾಭಿಷೇಕ-ಸಮರಭೂಪಾಲವಾಹನ ನಂತರ ದೇವಾಲಯದ ಚಿನ್ನದದ್ವಜಸ್ತಂಭದ ಮುಂಭಾಗ ಚೆಲುವನಾರಾಯಣಸ್ವಾಮಿಯ ಸಾನ್ನಿಧ್ಯದಲ್ಲಿ ಮಾಲೆಮರ್ಯಾದೆ ಮಾಡಿ ಗೌರವಿಸಲಾಯಿತು. ನಾಲ್ಕನೇ ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಪ್ರಥಮ ಸ್ಥಾನೀಕ ಕರಗಂರಾಮಪ್ರಿಯ ಎರಡನೇ ಸ್ಥಾನೀಕ ಕೆ.ಎನ್ ರಂಗಪ್ರಿಯ, ಮೂರನೇ ಸ್ಥಾನೀಕ ಕೋವಿಲ್ ನಂಬಿ ಮುಕುಂದನ್ ಸ್ವಾಮಿಯ ಮಾಲೆಮರ್ಯಾದೆ ಸ್ವೀಕರಿಸಿದರು.
ರಾಜಮುಡಿ ಜಿಲ್ಲಾಖಜಾನೆಗೆ
ವೈರಮುಡಿ ಉತ್ಸವದ ದಿನದಿಂದ ತೀರ್ಥಸ್ನಾನದವರೆಗೆ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ಮೈಸೂರು ರಾಜ ಒಡೆಯರ್ ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟ ಮತ್ತು 15 ದಿವ್ಯ ಆಭರಣಗಳು ಮಂಡ್ಯಜಿಲ್ಲೆಯ ಅಪರಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜುರವರ ನೇತೃತ್ವದಲ್ಲಿ ಶನಿವಾರ ಜಿಲ್ಲಾ ಖಜಾನೆಗೆ ಮರಳಲಿದೆ. ಬೆಳಿಗ್ಗೆ 11 ಗಂಟೆಗೆ ಬೊಕ್ಕಸದಲ್ಲಿರುವ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಹೊರತೆಗೆದು ಸ್ಥಾನೀಕರು, ಅರ್ಚಕರು, ಪರಿಚಾರಕರು ಹಾಗೂ ಪರಕಾಲಮಠದ ಪ್ರತಿನಿಧಿಯ ಸಮಕ್ಷಮ ಪರಿಶೀಲಿಸಿ ಮೊಹರುಮಾಡಿ ತಿರುವಾಭರಣಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯೊಂದಿಗೆ ಕಳುಹಿಸಲಾಯಿತು
ಶನಿವಾರ ಶೇರ್ತಿಸೇವೆ ಮತ್ತು ಮಹಾನಿವೇಧನ
ಶ್ರೀಕೃಷ್ಣ-ಬಲರಾಮರು ಆರಾಧಿಸಿದ ದಿನವಾದ ಶನಿವಾರ ಚೆಲುವನಾರಾಯಣಸ್ವಾಮಿಗೆ ಮಹಾನಿವೇದನ ಅನ್ನಕೋಟಿ ನಡೆದರೆ ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರಿಗೆ ಮತ್ತು ಬೆಟ್ಟದೊಡೆಯ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ ನಡೆಯಿತು ರಾತ್ರಿ ಮೂಲಮೂರ್ತಿ ಮತ್ತು ಉತ್ಸವಮೂರ್ತಿ ಒಂದೇ ಗರ್ಭಗೃಹದಲ್ಲಿ ದರ್ಶನ ನೀಡುವ ಶೇರ್ತಿಸೇವೆ ನಡೆಯಲಿದೆ