ವೈಯಕ್ತಿಕ ಸ್ವಚ್ಚತೆಯ ಮಹತ್ವ, ಆಚರಣೆ ಕೃತಿ ಬಿಡುಗಡೆ

ಕೋಲಾರ, ಜು.೩೦: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ದಿಗ್ಗಜರು ಸಾಹಿತ್ಯ ಕೃಷಿ ಮಾಡಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವಿದ್ದವನೇ ಬದುಕಲು ಸಾಧ್ಯ, ಇಂತಹ ಸಾಹಿತ್ಯ ಕ್ಷೇತ್ರದಲ್ಲಿ ತಿಮ್ಮಸಂದ್ರ ನಾಗರಾಜ್ ರವರ ೫ನೇ ಪುಸ್ತಕ ವೈಯಕ್ತಿಕ ಸ್ವಚ್ಛತೆಯ ಮಹತ್ವ ಮತ್ತು ಆಚರಣೆಎಂಬ ಪುಸ್ತಕವನ್ನು ಜಿಲ್ಲೆಯ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳು ಓದಿ ವೈಯಕ್ತಿಕ ಸ್ವಚ್ಛತೆಯ ಮಹತ್ವ ಅರಿಯ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕನ್ನಯ್ಯ ರವರು ಅಭಿಪ್ರಾಯಪಟ್ಟರು.
ಕೋಲಾರ ನಗರದ ಭಾರತ ಸೇವಾದಳ ಕಚೇರಿಯಲ್ಲಿ ಲೇಖಕರಾದ ತಿಮ್ಮಸಂದ್ರ ನಾಗರಾಜ್ ರವರ ೫ನೇ ಪುಸ್ತಕವಾದ ವೈಯಕ್ತಿಕ ಸ್ವಚ್ಛತೆಯ ಮಹತ್ವ ಮತ್ತು ಆಚರಣೆ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಿಮ್ಮಸಂದ್ರ ನಾಗರಾಜ ರವರು ಬರೆದಿರುವ ವೈಯಕ್ತಿಕ ಸ್ವಚ್ಛತೆಯ ಮಹತ್ವ ಮತ್ತು ಆಚರಣೆ ಪುಸ್ತಕ, ಆರೋಗ್ಯವೇ ಮಹಾಭಾಗ್ಯ, ನಮ್ಮ ನಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಸುಚಿತ್ವ ಕಾಪಾಡಿದಾಗ ಉತ್ತಮ ನಾಗರಿಕನಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಮಾತನಾಡಿ ತಿಮ್ಮಸಂದ್ರ ನಾಗರಾಜ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ. ತಾನು ಪ್ರತಿನಿಧಿಸುವ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆನ್ನುವ ತುಡಿತ, ಕಾಳಜಿ ಸದಾ ಇವರಲ್ಲಿ ಕಾಣಬಹುದು. ಇವರ ಸಮಾಜಮುಖಿ ಚಿಂತನೆಯ ಭಾಗವೇ ಬರವಣಿಗೆ. ಸಮಾಜಕ್ಕೆ ಉಪಯುಕ್ತ ಆಗುವ ಪುಸ್ತಕ ಮತ್ತು ಲೇಖನಗಳು ಇವರ ಲೇಖನಿಯಿಂದ ನಿರಂತರವಾಗಿ ಮೂಡಿ ಬರುತ್ತಿವೆ.ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಬೆಳೆಯುತ್ತಿದ್ದು ಇವರ ೫ ನೇ ಪುಸ್ತಕ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂದರು.
ಕೃತಿಯ ಲೇಖಕ ತಿಮ್ಮಸಂದ್ರ ನಾಗರಾಜ್ ಮಾತನಾಡಿ ವ್ಯಕ್ತಿಯೂ ಸ್ವಚ್ಛವಾಗಿರುವುದು ಎಷ್ಟು ಮುಖ್ಯ ಎನ್ನುವುದನ್ನು ಹೇಳಲಾಗಿದೆ. ಸುಚಿತ್ವ ಕಾಪಾಡಿಕೊಳ್ಳದೆ ಇದ್ದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಬಾಹ್ಯ ಸ್ವಚ್ಛತೆಗೆ ಹೆಚ್ಚಿನ ಮಾನ್ಯತೆ ನೀಡುವ ಸಮಾಜದಲ್ಲಿ ಪರಿಪೂರ್ಣ ಆರೋಗ್ಯವಂತರಾಗಲು ವೈಯಕ್ತಿಕ ಸ್ವಚ್ಛತೆ ಮುಖ್ಯವಾಗಿದೆ. ಇಂತಹ ಪುಸ್ತಕವನ್ನು ಎಲ್ಲಾ ಶಾಲೆಗಳ ಶಿಕ್ಷಕರು, ಮಕ್ಕಳು ಓದಿ ಸುಚಿತ್ವದ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಶರಣಪ್ಪ ಗಬ್ಬುರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕರಾದ ಗಿರೀಶ್, ಮುಖ್ಯ ಶಿಕ್ಷಕರಾದ ಕೆಂಬೋಡಿ ಮುನಿಸ್ವಾಮಿ. ಶ್ರೀ ರಾಮ್ ಮತ್ತು ಮಾಜಿ ಸಿಆರ್‍ಪಿ ಸಿಂಗ್, ಭಾರತ ಸೇವಾದಳ ಸಂಘಟಕರಾದ ದಾನೇಶ್ ಹಾಗೂ ರಿಯಾಜ್ ಮುಂತಾದವರು ಉಪಸ್ಥಿತರಿದ್ದರು.