ವೈಯಕ್ತಿಕ ದ್ವೇಷ ಸಾಧನೆಗೆ ನನ್ನ ವಿರುದ್ಧ ಸುಳ್ಳು ಆರೋಪ: ಅರಳಿ ವಿರುದ್ಧ ಕಾನೂನು ಹೋರಾಟ: ಬಾಬುವಾಲಿ

ಬೀದರ್:ಫೆ.22: ವಯಕ್ತಿಕ ದ್ವೇಷ ಹಾಗೂ ಹಗೆತನ ಸಾಧಿಸಲು ಹಾಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನನ್ನ ವಿರೂದ್ಧ ಸುಳ್ಳು ಆರೋಪ ಮಾಡುತ್ತಿದ್ದು, ಅವರ ವಿರೂದ್ಧ ವಿಧಾನ ಪರಿಷತ್ ಸಭಾಪತಿಗೆ ದೂರು ಸಲ್ಲಿಸಲಾಗುವುದು ಜೊತೆಗೆ ಅವರ ವಿರೂದ್ಧ ಕಾನೂನು ಹೋರಾಟಕ್ಕೆ ಸಿದ್ಧನಾಗಿರುವುದಾಗಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ ತಿಳಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ನಾನು ಬೂಡಾ ಅಧ್ಯಕ್ಷ ಸ್ಥಾನ ಬಿಟ್ಟು ಒಂದು ವರ್ಷ ಆದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಮಾತ್ರಕ್ಕೆ ಅಧಿಕಾರ ದುರುಪಯೋಗಕ್ಕೆ ಇಳಿದಿರುವುದು ದುರಹಂಕಾರದ ಪರಮಾವಧಿ ಎಂದು ಕಿಡಿ ಕಾರಿದರು.
ನಾನು ಅಧಿಕಾರಕ್ಕೇರುವಾಗ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆದಾಯ ಒಂದು ಕೋಟಿ ಇದ್ದುದು ನಾನು ಅಧಿಕಾರ ಬಿಟ್ಟು ಬರುವ ಸಮಯದಲ್ಲಿ 23 ಕೋಟಿಗೆ ತಲುಪಿದೆ. ಯಡಿಯೂರಪ್ಪ ಬಡಾವಣೆ ನಿರ್ಮಿಸಿ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಥಾಪಿಸಲಾದ ಸಿದ್ಧರಾಮಯ್ಯ ಲೆಔಟ್‍ನಲ್ಲಿ ನಿವೇಶನ ಪಡೆದವರು ಇಂದಿಗೂ ದಾಖಲೆಗಾಗಿ ಓಡಾಡುತ್ತಿದ್ದಾರೆ. 75ನೇ ಸ್ವತಂತ್ರ ಅಮೃತ ಮಹೋತ್ಸವ ಸಂದರ್ಭದಲ್ಲಿ ನಗರದಲ್ಲಿ 75 ಜನ ಮಹಾಪುರುಷರ ಹೆಸರಿನಲ್ಲಿ ಉದ್ಯಾನವನಗಳ ಅಭಿವೃದ್ಧಿಗೊಳಿಸಲಾಗಿದೆ. ಗಣೇಶ ವಿಸರ್ಜನೆಗೆಂದು 2 ಕೋಟಿ ವೆಚ್ಚದಲ್ಲಿ ಪ್ರೆತ್ಯೇಕ ಹೊಂಡ ನಿರ್ಮಿಸಲಾಗುತ್ತಿದೆ, ಪಾಪನಾಶ ಕೆರೆ ಮೇಲೆ ಪುಟಪಾತ ನಿರ್ಮಿಸಿ ಸುಮಾರು 2 ಕೋಟಿ ವೆಚ್ಚದಲ್ಲಿ ಲೇಖ್ ಅಭಿವೃದ್ಧಿಪಡಿಸಲಾಗಿದೆ. ಆಕ್ರಮ ಲೆಔಟ್‍ಗಳನ್ನು ಪತ್ತೆ ಹಚ್ಚಿ ಅನೇಕ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಕಳೆದ 30 ವರ್ಷಗಳಲ್ಲಿ ಯಾರು ಮಾಡದ ಕಾರ್ಯ ಬರೀ ಮೂರು ವರ್ಷಗಳಲ್ಲಿ ಮಾಡಿರುವುದು ಎಮ್.ಎಲ್.ಸಿ ಅರಳಿಗೆ ಸಹಿಸಲಿಕ್ಕೆ ಆಗುತ್ತಿಲ್ಲ. ಈ ಎಲ್ಲ ಕಾರ್ಯ ಮಾಡುವಾಗಲೂ ಸಭೆ ಕರೆದಾಗ ಅರಳಿಯವರನ್ನು ಸಭೆಗೆ ಕರೆದೆ ಈ ಕಾರ್ಯ ಮಾಡಲಾಗಿದೆ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಅದು ಸತ್ಯವಾಗಿದ್ದರೆ ನಾನು ಗಲ್ಲಿಗೇರಲು ಸಿದ್ಧ. ವಿನಾಕಾರಣ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸದಲ್ಲಿ ತೊಡಗಿರುವ ಅರಳಿ ಹಾಗೂ ಅವರ ಸಹೋದರರರು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದನ್ನು ಸಾರ್ವಜನಿಕರ ಗಮನಕ್ಕೆ ತರುತ್ತೇನೆ. ಕಾನೂನು ವಿರೂದ್ಧ ಹೋರಾಟಕ್ಕೂ ಸೈ ಎಂದರು.
ನಾವು ಸಭೆ ಮಾಡುವುದು. ನಮ್ಮ ಸಲಹೆ ತಿಳಿಸುವುದು. ಆದರೆ ಅನುಷ್ಟಾನ ಅಧಿಕಾರಿಗಳೆ ಮಾಡುತ್ತಾರೆ ಎಂಬ ಕನಿಷ್ಟ ಜ್ಞಾನ ಅರಳಿಗಿಲ್ಲ. ನಾನು ಕರೆದ ಎಲ್ಲ ಸಭೆಗಳಿಗೆ ಈಗಿನ ಪೌರಾಡಳಿತ ಸಚಿವ ರಹಿಮ್ ಖಾನ್, ಮಾಜಿ ವಿಧಾನ ಪರಿಷತ್ ಸಭಾಪತಿ ರಘುನಥರಾವ ಮಲ್ಕಾಪುರೆ ಅವರು ಇದರಲ್ಲಿ ಮೌನ ವಹಿಸಿರುವುದು ನನಗೆ ಆಶ್ಚರ್ಯ ತಂದಿದೆ ಎಂದರು.
ಅರಳಿ ಅವರು ತಮ್ಮ ಅನುದಾನದಲ್ಲಿ ಎಷ್ಟು ಕಡೆ ಎರಡೆರಡು ಬಾರಿ ಅನುದಾನ ನೀಡಿದ್ದಾರೆ, ಯಾರ ಬಳಿ ಎಷ್ಟು ಪರ್ಸೆಂಟೆಜ್ ಪಡೆದಿದ್ದಾರೆ ಎಂಬುದು ಗೊತ್ತಿದೆ. ಅವರ ಹಿರಿಯ ಸಹೋದರ ಸೂರ್ಯಕಾಂತ ಅರಳಿ ಕೊಟ್ಯಾವಧಿ ಹಣ ದುರುಪಯೋಗಪಡಿಸಿಕೊಂಡು ಇಂದು ಚಿದ್ರಿ ರಸ್ತೆಯಲ್ಲಿ ಬಾರ್ ನಿರ್ಮಿಸಿದ್ದಾರೆ. ಅವರ ಕಿರಿಯ ಸಹೋದರ ಡಾ.ಗೌತಮ ಅರಳಿ 14 ವರ್ಷಗಳಿಂದ ಒಂದೆ ಜಿಲ್ಲೆಯಲ್ಲಿ ನಾಲ್ಕೈದು ಇಲಾಖೆಗಳ ಹೆಚ್ಚುವರಿ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅರಳಿ ಅವರು ತಮ್ಮ ಪ್ರಭಾವ ಬಳಿಸಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಅರಳಿ ಹಾಗೂ ಅವರ ಸಹೋದರರು ಎಷ್ಟು ಆಕ್ರಮ ಆಸ್ತಿ ಗಳಿಸಿದ್ದಾರೆ ಎಂಬುದು ಲೋಕಾಯುಕ್ತ ತನಿಖೆಯಾಗಲಿ ಹಾಗೇ ಅಡಳಿತಾತ್ಮಕ ತನಿಖೆ ಮಾಡಲು ಸರ್ಕಾರವನ್ನು ಒತ್ತಾಯಿಸುವುದಾಗಿ ಬಾಬುವಾಲಿ ಹೇಳಿದರು.