ವೈಯಕ್ತಿಕ ಕಾಮಗಾರಿಗಳಿಂದ ಆರ್ಥಿಕ ಸಬಲತೆ: ಸೋಮಶೇಖರ ಜಾಡರ್

ಜೇವರ್ಗಿ:ನ.25: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರ ಜೀವನೋಪಾಯಕ್ಕೆ ಅಗತ್ಯವಿರುವ ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗ್ರಾಮೀಣ ಉದ್ಯೋಗ ತಾಲೂಕಾ ಸಹಾಯಕ ನಿರ್ದೇಶಕ ಸೋಮಶೇಖರ ಜಾಡರ್ ಅವರು ಕರೆ ನೀಡಿದರು.
ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಶುಕ್ರವಾರ 2024-25 ನೇ ಸಾಲೀನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾ ಯೋಜನೆಯ ತಯಾರಿಕೆ ನಿಮಿತ್ತ ಹಮ್ಮಿಕೊಂಡಿರುವ ಗ್ರಾಮ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ದಿಸೆಯಲ್ಲಿ ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಸಣ್ಣ ಮತ್ತು ಅತೀ ಸಣ್ಣ ರೈತರು, ಮಹಿಳಾ ಪ್ರಧಾನ ಕುಟುಂಬಗಳು ಅಕೂಶಲ ಕೂಲಿಕಾರರು ಯೋಜನೆಯಡಿ ದೊರಕುವ ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಸ್ವಾಮಿ ಅವರು ಮಾತನಾಡಿ, ಕೃಷಿಕರು ಜೀವನೋಪಾಯಕ್ಕೆ ಅಗತ್ಯವಿರುವ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ಇಂಗು ಗುಂಡಿ, ದನದ ಕೊಟ್ಟಿಗೆ, ಕುರಿ ದೊಡ್ಡಿ, ಎರೆಹುಳು ತೊಟ್ಟಿ, ಇರುಳ್ಳಿ ಶೆಡ್, ಸೇರಿದಂತೆ ಅರಣ್ಯ, ರೇಷ್ಮೇ, ಕೃಷಿ ಮತ್ತು ತೋಟಗಾರಿಕೆಯಂತಹ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಗ್ರಾಮೀಣ ಜನರ ಸಮಗ್ರ ಅಭಿವೃದ್ಧಿ ಆಗಲಿದೆ ಎಂದರು.
ಇದೇ ವೇಳೆ ನರೇಗಾ ಕಾಮಗಾರಿ ಮತ್ತು ಕೂಲಿ ಬೇಡಿಕೆ ಅರ್ಜಿ ಸ್ವೀಕರಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಪಾಟೀಲ ಅವರು ಗ್ರಾಮಸಭೆಯ ಅಧ್ಯಕ್ಷತೆವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ, ಗುಂಡಪ್ಪ ಜಡಗಿ, ಕಾಂತಪ್ಪ, ಪಂಡಿತ, ಸತೀಶ್, ಸುರೇಶ್, ಸೋಮರಾಯ, ಅಶೋಕ ಹಾಗೂ ಕಾರ್ಯದರ್ಶಿ ಕು. ಸವಿತಾ ಉಮ್ಮರಗಿ, ತಾ.ಪಂ ಐಇಸಿ ಸಂಯೋಜಕ ಚಿದಂಬರ ಪಾಟೀಲ, ಡಿಇಓ ಪರಶುರಾಮ, ಕರ ವಸೂಲಿಗಾರ ಗುರುನಾಥ, ಶಿವು ಸೇರಿದಂತೆ ಗ್ರಾಮದ ಮುಖಂಡರು, ರೈತರು ಹಾಗೂ ನರೇಗಾ ಕೂಲಿಕಾರರು ಭಾಗವಹಿಸಿದ್ದರು.