ವೈಭವದ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ರಥೋತ್ಸವ

ಕುಣಿಗಲ್, ಏ. ೧೬- ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವವು ಹರಗುರುಚರಮೂರ್ತಿಗಳು ದೇಶ ವಿದೇಶಗಳಿಂದ ಬಂದಂತಹ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಾ ರಥೋತ್ಸವದಲ್ಲಿ ಭಾಗವಹಿಸುವ ಮೂಲಕ ಪುನೀತರಾದರು.
ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಸಾಮಾಜಿಕ ಕ್ರಾಂತಿ ಕೈಗೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ತಮ್ಮ ಶಿಷ್ಯ ವೃಂದದ ಜೊತೆ ಸಂಚರಿಸಿ ಅನೇಕ ಪವಾಡಗಳನ್ನು ಮಾಡಿದಂತಹ ಮಹಾ ಕಾಲಜ್ಞಾನಿಯಾಗಿ ಚಿಂತಕರಾಗಿ ಯಾವುದೇ ಜಾತಿ ಮತ ಭೇದವಿಲ್ಲದೆ ಲಕ್ಷಾಂತರ ಜನರ ಆರಾಧ್ಯ ದೈವವಾದ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವವು ಬಹಳ ವೈಭವವಾಗಿ ಜರಗಿತು.
ನೆರೆದಿದ್ದ ಭಕ್ತರು ಹೂವು ದವನ ಬಾಳೆಹಣ್ಣು ರಥಕ್ಕೆ ಅರ್ಪಿಸುವ ಮೂಲಕ ತಮ್ಮಗಳ ಹರಕೆಯನ್ನು ಸಲ್ಲಿಸಿ ಕಣ್ತುಂಬಿಕೊಂಡರು.
ಬಿಸಿಲಿನ ಝಳಕ್ಕೆ ಭಕ್ತರು ದಾರಿ ಉದ್ದಕ್ಕೂ ಎರಡು ಬದಿಯಲ್ಲಿ ಕುಡಿಯುವ ನೀರು ಮಜ್ಜಿಗೆ ಪಾನಕ ಕೋಸಂಬರಿ ವಿತರಿಸಿದರು.
ರಥೋತ್ಸವದ ದಿವ್ಯ ಸಾನಿಧ್ಯವನ್ನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು, ಗುರುವಣ್ಣ ದೇವರ ಮಠದ ಸ್ವಾಮೀಜಿಗಳು ತಹಶೀಲ್ದಾರ್ ವಿಶ್ವನಾಥ್, ದೇವಸ್ಥಾನ ಆಡಳಿತ ಅಧಿಕಾರಿ ಕೃಷ್ಣಪ್ಪ, ಕ್ಷೇತ್ರದ ಅಧೀಕ್ಷಕರಾದ ಲಲಿತಮ್ಮ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಭಕ್ತರು ಭಾಗವಹಿಸಿದ್ದರು.
ರಥೋತ್ಸವ ನಡೆಯುವ ವೇಳೆ ಅಹಿತಕರ ಘಟನೆ ನಡೆಯದಂತೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.