ವೈಭವದಿಂದ ನಡೆದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ

ಚಿತ್ರದುರ್ಗ ಮಾ. 24: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆಯ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮವೂ ಮಾ.23ರ ಮಂಗಳವಾರ ನೆರದಿದ್ದ ಭಕ್ತಾಧಿಗಳ ಸಮ್ಮುಖದಲ್ಲಿ ಸಕಲ ಬಿರುದು ಬಾವಲಿಗಳೊಂದಿಗೆ ನಡೆಸಲಾಯಿತು.
ನಂತರ ಅಷ್ಟ ದಿಕ್ಪಾಲಕರಿಗೆ ಬಲಿದಾನ ನೀಡುವ ಕಾರ್ಯ ನಡೆಯಿತು.ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದು, ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಜೈ ಬಸವೇಶ ಜೈ.ಜೈ ಬಸವೇಶ, ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಮಹಾರಾಜ್ ಕೀ ಜೈ ಎಂಬ ನಾಮಸ್ಮರಣೆ ಕೇಳಿ ಬಂದವು. 
ಸ್ವಾಮಿಯ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಸ್ವಾಮಿಯ ರಥೋತ್ಸವದ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ರಥೋತ್ಸವಕ್ಕೆ ಚಾಲನೆ ದೊರೆತ ನಂತರ ಅನೇಕರು ಸಂಭ್ರಮದಿಂದ ತೇರು ಎಳೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ದೇಗುಲದ ಗರ್ಭಗುಡಿಯಲ್ಲಿದ್ದ ಬಸವೇಶ್ವರ ಸ್ವಾಮಿಗೆ ಬೆಳಿಗ್ಗೆ ಬಿಲ್ವಪತ್ರೆ ಅರ್ಚನೆ, ಪುಷ್ಪಾರ್ಚನೆ, ಮಹಾರುದ್ರಾಭಿಷೇಕ ಜರುಗಿತು.