ವೈಭವದಿಂದ ಜರುಗಿದ ಶ್ರೀ ಮನೋನ್ಮಣಿ ವೈದ್ಯನಾಥೇಶ್ವರ ವಾರ್ಷಿಕೋತ್ಸವ

ಸಂಜೆವಾಣಿ ವಾರ್ತೆ
ಯಳಂದೂರು.ಏ.30:- ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿರುವ ಸಾವಿರಾರು ವರ್ಷಗಳ ಐತಿಹ್ಯ ಇರುವ ಶ್ರೀ ಮನೋನ್ಮಣಿ ಸಹಿತ ಶ್ರೀ ವೈದ್ಯನಾಥೇಶ್ವರ ವಾರ್ಷಿಕೋತ್ಸವವು ಸೋಮವಾರ ಸಂಭ್ರಮ ಸಡಗರಗಳಿಂದ ನಡೆಯಿತು.
ಕಳೆದ ಎರಡು ದಿನಗಳಿಂದ ಇದರ ನಿಮಿತ್ತ ಶ್ರೀ ವೈದ್ಯನಾಥೇಶ್ವರ ಸೇವಾ ಸಮಿತಿ ವತಿಯಿಂದ ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಪ್ರಧಾನ ಗಣಪತಿ ಪೂಜೆ, ಶುದ್ಧ ಪುಣ್ಯಃ, ಕಳಸ ಪೂಜೆ, ಗಣಪತಿ ಹೋಮ, ಪಾರ್ವತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಅಲ್ಲದೆ ಇದಕ್ಕಾಗಿ ದೇಗುಲವನ್ನು ತಳಿರು ತೋರಣ, ಹಸಿರು ಚಪ್ಪರ, ವಿಶೇಷ ಹೂವುಗಳ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಕಂಕರಿಸಲಾಗಿತ್ತು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಧರ್ಮದರ್ಶಿ ಎಂ.ಎಸ್. ಶಿವಪ್ಪ ಮಾತನಾಡಿ, ಮಾಂಬಳ್ಳಿ ಗ್ರಾಮಕ್ಕೆ ತನ್ನದೇ ಆದ ಐತಿಹ್ಯವಿದೆ. ಇಲ್ಲಿ ಸಾವಿರಾರು ವರ್ಷಗಳ ಹಳೆಯ ಅನೇಕ ದೇಗುಲಗಳಿವೆ. ವೈದ್ಯನಾಥೇಶ್ವರ ದೇಗುಲವೂ ಇದರಲ್ಲಿ ಒಂದಾಗಿದೆ. ಇದು ತುಂಬಾ ಶಿಥಿಲವಾಗಿದ್ದು ಇದನ್ನು ನಮ್ಮ ಪೂರ್ವಜರು ದುರಸ್ತಿ ಮಾಡಿ ಇಲ್ಲಿ ಪ್ರತಿ ವರ್ಷವೂ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದು.
ನಂತರ ಇಡೀ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದಲೂ ಇದರ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಲ್ಲಿಗೆ ಕರ್ನಾಟಕ ಸೇರಿದಂತೆ ಪಕ್ಕದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲೂ ಭಕ್ತರಿದ್ದಾರೆ. ಕಳೆದ 2 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಅಲ್ಲದೆ ಇಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದಾದ ಬಳಿಕ ಗಾರುಡಿಗೊಂಬೆ, ಚಂಡೆಮದ್ದಾಳೆ, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ದೇವರಪಟದ ಕುಣಿತ, ನಂದಿಕಂಬ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮಾಂಬಳ್ಳಿ ಹಾಗೂ ಅಗರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು.
ರಸ್ತೆ ಬದಿಯಲ್ಲಿ ದೇವರಿಗೆ ನೂರಾರು ಭಕ್ತರು ಪೂಜೆಯನ್ನು ಕೊಡುವ ಮೂಲಕ ಭಕ್ತಿ ಮೆರೆದರು.