ವೈದ್ಯ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಆ5: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಸಿಬ್ಬಂದಿಯನ್ನು ಸಾರ್ವಜನಿಕರ ಆರೋಗ್ಯ ಸೇವೆಗಾಗಿ ಸರ್ಕಾರವು ನೇಮಕ ಮಾಡಿದ್ದು, ವೈದ್ಯ ಸಿಬ್ಬಂದಿಯು ಆಸ್ಪತ್ರೆಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕಲ್ಲದೇ ಪ್ರಾಮಾಣಿಕವಾಗಿ ಅವರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಮುಂದಾಗಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಮತ್ತು ಆಸ್ಪತ್ರೆಯಲ್ಲಿನ ಕುಂದು-ಕೊರತೆಗಳನ್ನು ಆಲಿಸುವ ಆರೋಗ್ಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೇ, ಎಲ್ಲಾ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ಜನರೊಂದಿಗೆ ಮಾನವೀಯತೆಯಿಂದ ವರ್ತಿಸುವ ಮೂಲಕ ಸಮರ್ಪಕ ಸೇವೆ ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಅಲ್ಲದೇ ಗ್ರಾಮೀಣ ಪ್ರದೇಶದಿಂದ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣ ವೈದ್ಯಕೀಯ ಸೇವೆ ನೀಡಿ, ಅವಶ್ಯವಿದ್ದಲ್ಲಿ ಮಾತ್ರ ಜಿಲ್ಲಾಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು. ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ನೀಡುವಂಥ ಗುಣಮಟ್ಟದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ನೀಡಿದರೆ, ಆಸ್ಪತ್ರೆಗೆ ಬರುವ ರೋಗಿಗಳ ಪಾಲಿಗೆ ನೀವೆಲ್ಲ ದೇವರ ಸ್ವರೂಪವಾಗಿ ಕಾಣುತ್ತೀರಿ ಎಂದು ಹೇಳಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜ ಮಾತನಾಡಿ, ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನವೂ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಸುಮಾರು 500ವರೆಗೂ ಹೆಚ್ಚುತ್ತಿದ್ದು, ಎಲ್ಲರಿಗೂ ಉತ್ತಮ ಗುಣಮಟ್ಟದ ಸೇವೆ ನೀಡಲಾಗುತ್ತಿದೆ. ರೋಗಿಗಳಿಗೆ ನೀರಿನ ಅಗತ್ಯವಿದ್ದು, ಆಸ್ಪತ್ರೆಯ ಬಳಿ ನೀರಿನ ಜಲಾಗಾರ ನಿರ್ಮಾಣ, ಆಸ್ಪತ್ರೆ ಮತ್ತು ವಸತಿ ಗೃಹಗಳ ದುರಸ್ತಿ, 24/7 ಕಾರ್ಯನಿರ್ವಹಿಸುವ ಆಸ್ಪತ್ರೆಗೆ ಸೋಲಾರ ವ್ಯವಸ್ಥೆ, ಬೀದಿದೀಪ, ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಸಭೆಗೂ ಮುನ್ನ ಶಾಸಕ ಬಸವರಾಜ ಶಿವಣ್ಣನವರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಜೊತೆಯಾಗಿ ಆಸ್ಪತ್ರೆಯಲ್ಲಿರುವ ಔಷಧ ವಿತರಣೆ ವ್ಯವಸ್ಥೆ, ವಿವಿಧ ಚಿಕಿತ್ಸಾ ಕೊಠಡಿಗಳು, ಐಸಿ ಮತ್ತು ಕ್ಷಕಿರಣ ಕೊಠಡಿ ಸೇರಿದಂತೆ ಆಸ್ಪತ್ರೆಯ ಎರಡು ಮಹಡಿಗಳನ್ನು ಪರಿಶೀಲನೆ ನಡೆಸಿ ವಿಭಾಗೀಯ ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ದುಸ್ಥಿತಿಯಲ್ಲಿರುವ ಕೊಠಡಿಗಳನ್ನು ವೀಕ್ಷಿಸಿ ಚಿಕಿತ್ಸೆಗೆ ದಾಖಲಾದ ರೋಗಿಗಳ ಜೊತೆ ವೈದ್ಯ ಸಿಬ್ಬಂದಿಯ ಸೇವೆ ಕುರಿತು ವಾಸ್ತವ ಸ್ಥಿತಿ ತಿಳಿದುಕೊಂಡು ತುರ್ತು ಸಮಸ್ಯೆಗಳಿಗೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಡಾ. ಪುಟ್ಟರಾಜ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ದಾನಪ್ಪ ಚೂರಿ, ಪುರಸಭೆಯ ಮಾಜಿ ಸದಸ್ಯರಾದ ದುರ್ಗೆಶ ಗೋಣೆಮ್ಮನವರ, ನಜೀರಅಹ್ಮದ್ ಶೇಖ್, ತಾಲೂಕು ಆರೋಗ್ಯಾಧಿಕಾರಿ ಎ.ಎಂ. ಕಾಗದಗಾರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಡಾ.ವೀರೇಶ ಹೊಸಮನಿ, ಡಾ.ರಾಘವೇಂದ್ರ, ಡಾ.ಶ್ರೀನಿವಾಸ, ಡಾ.ಎಂ.ನಾಗರಾಜ, ಮುಖಂಡರಾದ ಗಿರೀಶ ಇಂಡಿಮಠ, ಅರುಣಕುಮಾರ ಪಾಟೀಲ, ಸುಲೋಚನಾ ಹುಣಸಿಮರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.