ವೈದ್ಯ ಶಾಸಕರಾಗಿ ರಿಮ್ಸ್ – ಓಪೆಕ್ ಬಗ್ಗೆ ಕಾಳಜಿ ವಹಿಸಬೇಕಿತ್ತು

ರಾಯಚೂರು.ಮೇ.28- ತಮ್ಮ ಮಾಲೀಕತ್ವದ ಸಹಭಾಗಿತ್ವದಲ್ಲಿ ಅತ್ಯುತ್ತಮವಾಗಿ ನಿರ್ಮಾಣಗೊಂಡ ಶಿವಂ ಆಸ್ಪತ್ರೆ ಮಾದರಿಯಲ್ಲಿ ಒಬ್ಬ ವೈದ್ಯ ಶಾಸಕರಾಗಿ ಡಾ.ಶಿವರಾಜ ಪಾಟೀಲ್ ಅವರು, ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಗಳಲ್ಲೂ ಇದೇ ರೀತಿ ಸೌಲಭ್ಯ ದೊರೆಯಲು ಕಾಳಜಿ ವಹಿಸಿದ್ದರೇ, ಎಷ್ಟೋ ಜನರ ಪ್ರಾಣ ಉಳಿಸಬಹುದಾಗಿತ್ತು ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಿಎಂ ಕೇರ್‌ನಿಂದ ಕಳೆದ ವಾರ ಬಂದ ವೆಂಟಿಲೇಟರ್ ಮುಂದೆ ಫೋಟೋ ತೆಗೆದುಕೊಂಡ ಶಾಸಕರು ಕಳೆದ ವರ್ಷ ನೀಡಲಾದ 33 ನಿರುಪಯುಕ್ತ ವೆಂಟಿಲೇಟರ್‌ಗಳು ರಿಮ್ಸ್ ಆಸ್ಪತ್ರೆಯಲ್ಲಿ ಬಿದ್ದಿದ್ದು, ಅವುಗಳ ಮುಂದೆ ಏಕೆ ಫೋಟೋ ತೆಗೆಸಿಕೊಳ್ಳಲಿಲ್ಲ. ಪಿಎಂ ಕೇರ್‌ನಿಂದ 50 ಹೆಚ್ಚುವರಿ ವೆಂಟಿಲೇಟರ್ ಬಂದಿರುವುದು ಸ್ವಾಗತ. ಆದರೆ, ಇದು ಇನ್ನೂ ಒಂದು ವಾರದ ನಂತರ ಕಾರ್ಯರೂಪಕ್ಕೆ ಬರಬಹುದು. ಆದರೆ, ಈ ಹಿಂದೆ ಅತ್ಯಂತ ಅಗತ್ಯವಾಗಿದ್ದ ಸಂದರ್ಭದಲ್ಲಿ ಪಿಎಂ ಕೇರ್‌ನಿಂದ ನೀಡಲಾದ 33 ವೆಂಟಿಲೇಟರ್‌ಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಿದ್ದರೇ, ಎಷ್ಟೋ ಜನ ಬದುಕುಳಿಯುತ್ತಿದ್ದರು.
ನಾನು ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿದ್ದೇನೆ. ವೆಂಟಿಲೇಟರ್ ದೊರೆತ ಬಹುತೇಕ ಸೋಂಕಿತರು ಬದುಕಿ ಬಂದಿದ್ದಾರೆ. ಆದರೆ, ವೆಂಟಿಲೇಟರ್ ಕೊರತೆಯಿಂದ ಅನೇಕರು ಸಾವಿಗೆ ಗುರಿಯಾಗಿದ್ದಾರೆ. ಈ 33 ವೆಂಟಿಲೇಟರ್ ಇದ್ದು, ಉಪಯೋಗಕ್ಕೆ ಬಾರದ ಕಾರಣ ಅನೇಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಈಗ ಬಂದ 50 ವೆಂಟಿಲೇಟರ್ ಸಹ ಪಿಎಂ ಕೇರ್‌ನಿಂದಲೇ ಬಿಡುಗಡೆಗೊಂಡಿವೆ. ಒಳ್ಳೆಯ ಗುಣಮಟ್ಟದ ವೆಂಟಿಲೇಟರ್‌ಗಳು ಕಳುಹಿಸಿದ್ದಾರೆಂದು ನಂಬುತ್ತೇವೆ.
ಇಲ್ಲಿವರೆಗೂ ಈ 50 ವೆಂಟಿಲೇಟರ್‌ಗಳು ಕಾರ್ಯಾರಂಭಿಸಿಲ್ಲ. ಶೀಘ್ರವೇ ಕಾರ್ಯಾರಂಭಿಸಲಿ ಎಂದು ನಿರೀಕ್ಷಿಸುತ್ತೇವೆ. ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳಿಗೆ ಡಾ.ಶಿವರಾಜ ಪಾಟೀಲ್ ಅವರೇ ಭೇಟಿ ನೀಡಿ, ಅಲ್ಲಿಯ ಸವಲತ್ತುಗಳ ಬಗ್ಗೆ ಪರಿಶೀಲಿಸಬೇಕಾಗಿತ್ತು. ಸ್ಥಳೀಯ ನಾಯಕರ ನಿಷ್ಕ್ರಿಯೆಯಿಂದ ಜನ ನಮಗೆ ಕರೆ ಮಾಡಿದ್ದರು ಎನ್ನುವುದು ಶಾಸಕರು ಅರಿಯಬೇಕು. ಶಾಸಕರಿಗೆ ನಿಜವಾಗಿಯೂ ಇಲ್ಲಿಯ ವೈದ್ಯಕೀಯ ಸವಲತ್ತು ಸುಧಾರಣೆ ಬಗ್ಗೆ ಕಾಳಜಿಯಿದ್ದರೇ, ಬೋಯಿಂಗ್ ಆಸ್ಪತ್ರೆಗಾಗಿ ಮುಂದಾಳತ್ವ ವಹಿಸಿಕೊಳ್ಳಬೇಕು.
ಉಸ್ತುವಾರಿ ಸಚಿವರು, ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರು, ಬೋಯಿಂಗ್ ಆಸ್ಪತ್ರೆ ತರಲು ಸರ್ಕಾರದ ಮೇಲೆ ಒತ್ತಡವೇರಬೇಕು. ಗುಲ್ಬರ್ಗಾದಲ್ಲಿ ಈಗಾಗಲೇ ಅನೇಕ ಸವಲತ್ತುಗಳಿರುವುದರಿಂದ ರಾಯಚೂರಿಗೆ ಬೋಯಿಂಗ್ ಆಸ್ಪತ್ರೆ ತರುವ ದಿಟ್ಟತನವನ್ನು ಆಡಳಿತರೂಢ ಬಿಜೆಪಿ ಶಾಸಕರು, ಸಂಸದರು ಶ್ರಮಿಸಬೇಕು. ನಾವು ಅವರಿಂದ ನಿಲ್ಲಲು ಸಿದ್ಧರೆಂದು ಹೇಳಿದರು.