ವೈದ್ಯ ಭವನದಲ್ಲಿ ಬಿಚ್ಚಿದ ಜೋಳಿಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.14: ನಗರದ ವಿಮ್ಸ್ ನ ವೈದ್ಯ ಭವನ ಅಕ್ಷರಶಃ ಕಲಾ ದಾಸೋಹದ ಭವನವಾಗಿ ಮಾರ್ಪಟ್ಟಿತು. ವೈದ್ಯರು ,ಸಾಹಿತಿಗಳು ಕುಳಿತು ಗಂಭೀರವಾದ ವಿಷಯಗಳನ್ನು ಚರ್ಚಿಸಿತ್ತಿದ್ದ ಈ ಸ್ಥಳ ರಂಗ ಮಂಟಪವಾಗಿ ಕಲಾವಿದರ ಅಡಂಬೋಲವಾಗಿತ್ತು.ಸಂಗೀತದ ಕಲರವ ,ಸಂಭಾಷಣೆಯ ಮಾರ್ಧನಿ ವೈದ್ಯ ಭವನವನದಲ್ಲಿ ಅನುರಣಿಸಿತು.
ವಿಮ್ಸ್ ವೈದ್ಯಕೀಯ ಸಂಘ, ವಿಮ್ಸ್ ಕನ್ನಡ ಸಂಘ ಹಾಗು ಸನ್ಮಾರ್ಗ ಗೆಳೆಯರ ಬಳಗ ಬಳ್ಳಾರಿ ಇವರುಗಳ ಸಂಯೋಗದಲ್ಲಿ ಆಯೋಜಿಸಿದ ನಾಟಕವೇ ‘ಬಿಚ್ಚಿದ ಜೋಳಿಗೆ’ ಇದು ಡಾ.ಸ.ಜ ನಾಗಲೋಟಿಮಠ ಅವರ ಆತ್ಮಕಥನ ಆದರಿಸಿ ರಚಿಸಿದ ನಾಟಕವಾಗಿದ್ದು ಇದನ್ನು ರಂಗ ರೂಪಕ್ಕೆ ತಂದವರು ಗಣೇಶ ಅಮ್ಮಿನಗಡ, ನಿರ್ದೇಶನ ಹಾಗು ಸಂಗೀತ ಜಗದೀಶ್ ಆರ್ ಜಾಣೆ,  ಈ ನಾಟಕ ಪ್ರಸ್ತುತ ಪಡಿಸಿದವರು ಕಲಬುರಗಿ ರಂಗಾಯಣದ ಕಲಾವಿದರು.
ಸ.ಜ.ನಾ ಅವರ  ಸ್ಮರಣೆಯ ಹಾಡಿನೊಂದಿಗೆ ಕಲಾವಿದರೆಲ್ಲರು ಹಾಡುತ್ತಾ ಕುಣಿಯುತ್ತಾ ಬರುವ ಸನ್ನಿವೇಶ ನಾಟಕಕ್ಕೆ ಭರ್ಜರಿ ಆರಂಭ  ನೀಡಿತು.ಸ.ಜ.ನಾ ಪಾತ್ರಧಾರಿ ವೇದಿಕೆಯ ಬಲಭಾಗದ  ಎತ್ತರದ ಪೀಠದಲ್ಲಿ ಕುಳಿತು ತನ್ನ ಜೋಳಿಗೆ ಬಿಚ್ಚುತ್ತಾ ಹೋದಂತೆ ನಾಟಕದ ಅಂತರಂಗ ತೆರೆಯುತ್ತದೆ.
ಈ ನಾಟಕದ ಕಥೆ ಮೂರು ಹಂತಗಳಲ್ಲಿ ನಿರೂಪಿತಗೊಂಡಿದೆ ಮೊದಲ ಹಂತದಲ್ಲಿ ಸ.ಜ.ನಾ ಅವರ ಜನನ.ಬಾಲ್ಯ ತಂದೆ ತಾಯಿ,  ಪಡೆದ ಶಿಕ್ಷಣ, ಅನುಭವಿಸಿದ ನೋವು,ಕಿತ್ತು ತಿನ್ನುವ ಬಡತನ ,ತಂದೆ ತಾಯಿಗಳ ಸಾವು, ಸಂಸಾರ ಬಂಧನ ಈ ರೀತಿಯ ನೋವಿನ ಬದುಕನ್ನು ಈ ಭಾಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಸ.ಜ.ನಾ ಅಜ್ಜ ಮೊಮ್ಮಗನಿಗೆ ಬೀಡಿ ಸೇದುವುದನ್ನು ಅಭ್ಯಾಸ ಮಾಡಿಸುತ್ತಿರುವುದನ್ನು ಕಂಡ ಸ.ಜ.ನಾ  ತಂದೆ ಜಂಭಯ್ಯ ಅವರಪ್ಪನನ್ನು ಬೈಯುತ್ತಾನೆ ಆಗ ಆ ಮುದುಕ “ಎನೋ ಮಗನೇ ನಿನಗೆ ಮಗ ಬೀಡಿ ಸೇದುವುದನ್ನು ನೋಡಲಾಗುತ್ತಿಲ್ಲ ಆದರೆ ನನ್ನ ಮಗ ದಿನಾ ನನ್ನ ಕಣ್ಮುಂದೆ ಬೀಡಿ ಸೇದುತ್ತಾ ಓಡಾಡುವುದನ್ನು ಹೇಗೆ ನೋಡಲೋ” ಎಂದಾಗ ಮಗನ ಕಣ್ಣಲ್ಲಿ ನೀರು ಬರುವ ಸನ್ನಿವೇಶ ಪ್ರೇಕ್ಷಕರ ಕಣ್ಣನ್ನು ಆದ್ರಗೊಳಿಸುತ್ತವೆ. ಸ.ಜ.ನಾ ತಂದೆಯ ಸಾವಿನ ಸನ್ನಿವೇಶ ಸಾಲಗಾರರು ಸ.ಜ.ನಾ ಅವರಿಗೆ ಕೊಡುವ ಕಿರುಕುಳ ಈ ಸನ್ನಿವೇಶಗಳು ಪ್ರೇಕ್ಷಕನ ಹೃದಯದ ಜೋಳಿಗೆ ಬಿಚ್ಚಿ ಭಾವಾವೇಶದಲಿ ಕೊಚ್ವಿ ಹೋಗುವಂತೆ ಮಾಡುತ್ತವೆ.
ಸ.ಜ.ನಾ ಗೆಳೆಯ ಶಂಭುವಿನೊಡನೆ ಊಟಕ್ಕೆ ಕುಳಿತಾಗ ಗೋವಿನ ಜೋಳದ ರೊಟ್ಟಿ ಕಂಡು ಗೆಳೆಯ ಶಂಭು ಅವರ ಕಷ್ಟ ಅರ್ಥಮಾಡಿಕೊಂಡು .ಸ.ಜ.ನಾ ಅವರ ನೆರವಿಗೆ ನಿಲ್ಲುವ ಸನ್ನಿವೇಶ ಅಲ್ಲಿ ಬಳಸಿದ ಅಡಿಗೆ ಮನೆಯ ಸೆಟ್ಟು ವಾಸ್ತವತೆಯನ್ನು ಪ್ರತಿಬಿಂಬಿಸುತ್ತಿತ್ತು.ಶಂಭುವಿನ ಪಾತ್ರಧಾರಿಯ ನಟನೆ ನೈಜವಾಗಿತ್ತು.ಮದುವೆಯ ಸನ್ನಿವೇಶಕ್ಕೆ ಬಳಸಿದ ಶುಭಾಶಯದ ಹಾಡು ಆ ಸನ್ನಿವೇಶಕ್ಕೆ ಒಪ್ಪುವಂತಿತ್ತು.
ಎರಡನೆಯ ಭಾಗದಲ್ಲಿ ಸ.ಜ.ನಾ ಅವರ ಛಲ ಭರಿತ ಹೋರಾಟ ಹಿಡಿದ ಗುರಿ ಮುಟ್ಟ ಬೇಕೆನ್ನುವ ತವಕ, ಗುರಿ ತಲುಪಿದಾಗ  ಅವರಿಗಾದ ಸಂತೃಪ್ತಿ ವೈದ್ಯರಾಗಿ ಸಾಹಿತಿಯಾಗಿ ಸಮಾಜಕ್ಕೆ ಮಾಡಿದ ಸೇವೆ .ಸಂದ ಪ್ರಶಸ್ತಿ ಪಡೆದ ಸಿದ್ದಿ ಈ ವಿವರಗಳು ಎರಡನೇ ಭಾಗದಲ್ಲಿ ಹರಳುಗಟ್ಟಿವೆ .ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿ ಮೊದಲ ಸಂಬಳ ಪಡೆದಾಗ  ಸ.ಜ.ನಾ ಅವರಿಗೆ ತನ್ನ ತಂದೆ ತಾಯಿ ನೆನಪಾಗಿ ಕಣ್ಣೀರು ಸುರಿಸುವ ಸನ್ನಿವೇಶ ತಮ್ಮ ಆಸ್ಪತ್ರೆ ಜವಾನನಿಗೆ ಸಂಬಳದ ಒಂದಷ್ಟು ಭಾಗವನ್ನು ಅವನಿಗೆ ಕೊಟ್ಟು ಅವನ ನಗುವಿನಲ್ಲಿ ದೂರಾದ ತಂದೆ ತಾಯಿ ಕಾಣುವ  ಸ.ಜ.ನಾ ವ್ಯಕ್ತಿತ್ವ ನಮಗೊಂದು ಮಾದರಿ. ಉನ್ನತ ಹುದ್ದೆಯಲ್ಲಿದ್ದರು ಗರ್ವ ಅಹಂಕಾರ ಸುಳಿಯದ ವಿನಯದ ಸಾಕಾರ ಮೂರ್ತಿ ಯಂತೆ ಕಾಣುವ ಸ.ಜ.ನಾ ಅವರ ಪಾತ್ರ ನಾಟಕದ ಉದ್ದಕ್ಕೂ ಅಸಕ್ತಿ ಹಾಗು ಕುತೂಹಲದ ಕೇಂದ್ರವಾಗುತ್ತಾ ಹೋಗುತ್ತಾರೆ.
ಸಾಹಿತಿ ದೇಜಗೌ ಹಾಗು  ಸಿದ್ದಯ್ಯ ಪುರಾಣಿಕರ ಪಾತ್ರಗಳ ಆಗಮನ ನಾಟಕಕ್ಕೆ ವಿಶೇಷ ಮೆರಗನ್ನು ನೀಡಿತು.ಸಾಹಿತ್ಯಕ್ಕೆ ವೈದ್ಯ ಸಾಹಿತ್ಯ ಸೇರಬೇಕೆನ್ನುವ ಆ ಕವಿಗಳ ಮಾತು ಸ.ಜ.ನಾ ಅವರನ್ನು ಬರಹಗಾರನ್ನಾಗಿ ರೂಪಿಸಿತು. ಈ ಸನ್ನಿವೇಶಕ್ಕೆ ಬಳಸಿದ ಅಕ್ಕ ಮಹಾದೇವಿ ವಚನ ಆಹಾರ ಕಿರುದು ಮಾಢಿರೋ ಎನ್ನುವ  ವಚನ ಈ ಸನ್ನಿವೇಶಕ್ಕೆ ಹೆಚ್ಚುಸೂಕ್ತ ಹಾಗು ಸಂದರ್ಭೋಚಿತವಾಗಿತ್ತು.
ಮೂರನೇ ಅಂಕದಲ್ಲಿ ನಾಟಕದ ಉತ್ಕರ್ಷ ಸಂಘರ್ಷ  ಏರುತ್ತಾ ಹೋಗುತ್ತದೆ. ಸ.ಜನಾ ಅವರ ಏಳಿಗೆ ಪ್ರಾಮಾಣಿಕತೆ ಸಹಿಸದ ಜನ ಅವರ ವಿರುದ್ಧ ಪಿತೂರಿ ಹೆಣೆಯುತ್ತಾರೆ ರಾಜ ಕಾರಣಿ ಆಗಾಗ ಅವರ ಪ್ರಾಮಾಣಿಕತೆಯನ್ನು ಕೆರಳಿಸುತ್ತಾನೆ.
ರಾಜ ಕಾರಣಿಯ ಆಂಗಿಕ ಅಭಿನಯ ಗಮನ ಸೆಳೆಯುತ್ತದೆ .ಯಾರ ಪಿತೂರಿಗೂ ಬಗ್ಗದ ಸ.ಜ.ನಾ ಅವರ ನೇರ ನುಡಿ ಪಾರದರ್ಶಕತೆ ಕೆಲ ಕುಹಕಿಗಳಿಗೆ ನುಂಗಲಾರದ ತುತ್ತಾಗಿ ಕೊನೆಗೆ ಅವರ ವಿರುದ್ದ ಮುಷ್ಕರ ಹಾಗು ವಿರೋಧಿ ಚಟುವಟಿಕೆ ಜರುಗಿ ಅವರ ಆಸ್ಪತ್ರೆಯ ಟೇಬಲ್ ಕುರ್ಚಿ ಮುರಿದು ಸ.ಜ.ನಾ ಅವರನ್ನು ಹಿಗ್ಗಾ ಮುಗ್ಗಾ ತಳಿಸಿ  ಗುಂಪು ಮರೆಯಾಗುತ್ತಾರೆ. ಸ.ಜ.ನಾ ಅವರ ಬಿಚ್ಚಿದ ಜೋಳಿಗೆ ಮುಚ್ಚುತ್ತದೆ ಕೊನೆಯ ದೃಶ್ಯ ಕಂಡ ಪ್ರೇಕ್ಷಕ ದುಃಖ ತಡೆಯದೆ ತುಟಿ ಕಚ್ಚಿ ಹಿಡಿಯುತ್ತಾನೆ.
ಹೀಗೆ ತನ್ನ ಆತ್ಮ ಕಥೆ ಹೇಳುತ್ತಾ.. ನನ್ನ ಸೇವೆಗೆ ಸಮಾಜ ಎಂಥ ಬಹುಮಾನ ಕೊಟ್ಟಿದೆ ನೋಡಿ ಎನ್ನುತ್ತಾ  ಸ.ಜ.ನಾ ಕಥೆಯನ್ನ ನಿಲ್ಲಿಸಿ ವಿರಮಿಸಿತ್ತಾನೆ.
ಈ ಕಥೆಯಲ್ಲಿ ಬರುವ ೩೦ ಕ್ಕೂ ಹೆಚ್ಚು ಪಾತ್ರಗಳನ್ನು ೧೦ ಮಂದಿ ಕಲಾವಿದರು ನಿಭಾಯಿಸಿದ ರೀತಿ ಒಂದ ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಬದಲಾಗುವ ವೇಗ ನನಗಂತು ಅಚ್ಚರಿ ಮೂಡಿಸಿತು.ಪ್ರಮುಖ ಪಾತ್ರ ನಿರ್ವಹಿಸಿದ ಸಿದ್ದಾರ್ಥ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ.ಪಟ ಪಟನೆ ಹರಳುರಿದಂತೆ ಮಾತನಾಡುವ  ಆತನ ವಾಕ್ಪಟುತ್ವ ಪಾದರಸದಂತೆ ಓಡಾಡುವ ಆತನ ಅಭಿನಯ ಪ್ರೇಕ್ಷಕರ ಮನದಾಳದಲ್ಲಿ ನೆಲೆಯೂರಿ ನಿಂತಿದೆ. ಉಳಿದ ಎಲ್ಲಾ ಪಾತ್ರಧಾರಿಗಳು ತಮ್ಮ ಪಾತ್ರಗಳಿಗೆ  ನ್ಯಾಯ ಒದಗಿಸಿದ್ದಾರೆ  ಕುಡುಕ ವಿದ್ಯಾರ್ಥಿ,  ರಾಜಕಾರಣಿ , ವ್ಯಾಪಾರಿ, ವಾಚಮೆನ್ ,ಈ ಪಾತ್ರಗಳು ನಗೆಯ ಕಚಗುಳಿ ಇಡುತ್ತಾ ತಮ್ನ ಅಸ್ತಿತ್ವ ಸ್ಥಾಪಿಸಿವೆ.
ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾದ ಪರಿಕರ ಅವಗಳ ಮರು ಹೊಂದಾಣಿಕೆ ಮಾಡಿ ಇನ್ನೊಂದು ಸನ್ನಿವೇಶ ನಿರ್ಮಾಣ ಮಾಡುವ ಪಾತ್ರಧಾರಿಗಳ ಕ್ರಿಯಾಶೀಲತೆ ಮೆಚ್ಚುವಂತದ್ದು.
ಸನ್ನಿವೇಶಕ್ಕೆ ತಕ್ಕಂತೆ ಹಿನ್ನಲೆ ಸಂಗೀತ ,ದ್ವನಿ ಬೆಳಕಿನ ವಿನ್ಯಾಸ  ಮೇಕಪ್ ವಸ್ತ್ರವಿನ್ಯಾಸ ಈ ಅಂಶಗಳು ನಾಟಕಕ್ಕೆ ಇನ್ನಷ್ಟು ಮೆರಗನ್ನು ತಂದಿದೆ.
ಮುಗಿಸುವ ಮುನ್ನ
ಇಂತಹ ಒಂದು ಉತ್ತಮ ನಾಟಕಕ್ಕೆ ಪ್ರೇಕ್ಷಕರ ಕೊರತೆ ಎದ್ದುಕಾಣುತಿತ್ತು ಏನೂ ಹುರುಳಿಲ್ಲದ ನಾಟಕ ನೋಡಲು ಸಾವಿರಾರು ಪ್ರೇಕ್ಷಕರು ಕಿಕ್ಕಿರಿದು ನೆರೆಯುತ್ತಾರೆ ಇಂತಹ ಪ್ರಬುದ್ದ ನಾಟಕಕ್ಕೆ ಬೆರಳೆಣಿಕೆಯಷ್ಟು ಪ್ರೇಕ್ಷಕರ ಇದ್ದರಲ್ಲ ಎನ್ನುವುದೇ ನೋವು .ಪ್ರಚಾರದ ಕೊರತೆಯಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯಿತೋ ಅಥವಾ ಇಂತಹ ನಾಟಕ ನೋಡುವಾ ಪ್ರೇಕ್ಷಕ ವರ್ಗವೇ ಕಡಿಮೆಯಾಯಿತೋ ತಿಳಿಯುತ್ತಿಲ್ಲ.ಆದರೂ ಕಲಾವಿದರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮಜವಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ನಾಟಕಕ್ಕೆ ವೇದಿಕೆಯು ಚಿಕ್ಕದಾಗಿತ್ತು ಆದರೂ ಕಲಾವಿದರು ಇದ್ದದ್ದರಲ್ಲಿಯೇ  ಹೊಂದಿಸಿಕೊಂಡು ಶ್ರೇಷ್ಠ ಪ್ರದರ್ಶನ ನೀಡಿದರು.
ನಾಟಕದ ಪ್ರಾರಂಭದಲ್ಲಿ ಉದ್ಘಾಟನಾ ಕಾರ್ಯಕ್ರಮ ಇದ್ದು ತುಂಬಾ ಔಪಚಾರಿಕವಾಗಿ ನೆರೆವೇರಿತು.ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ಕಾರ್ಯಕ್ರಮ ಪ್ರಾರಂಭಿಸಿದರು. ಅದೇನೇ ಇದ್ದರೂ ವಿಮ್ಸ್ ಕನ್ನಡ ಸಂಘದವರು  ಉತ್ತಮ ಗುಣಮಟ್ಟದ ನಾಟಕ ಆಯೋಜಿಸಿ ಪ್ರೇಕ್ಷಕರಿಗೆ ರಂಗ ಸಂಕ್ರಾಂತಿಯ ಎಳ್ಳು ಬೆಲ್ಲ ಹಂಚಿದರು.
 
ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.