ವೈದ್ಯೆ ಸೋಗಿನಲ್ಲಿ ಕಳವು ಖತರ್ನಾಕ್ ನರ್ಸ್ ಸೆರೆ

ಬೆಂಗಳೂರು,ಜ.೧೯- ವೈದ್ಯೆಯ ವೇಷ ಧರಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್ನಾಕ್ ನರ್ಸ್ ನ್ನು ಆಶೋಕನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್? ಆಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಿ ಬಂಧಿತ ಆರೋಪಿಯಾಗಿದ್ದಾಳೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಕಳೆದ ಜ.೧೧ ರಂದು ಉಸಿರಾಟ ಸಮಸ್ಯೆಯಿಂದ ಸರಸಮ್ಮ ದಾಖಲಾಗಿದ್ದು, ಅಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ವೈದ್ಯರ ವೇಷದಲ್ಲಿ ವಾರ್ಡ್ ಒಳಗೆ ಬಂದ ಆರೋಪಿಯು ರೋಗಿಗೆ ಚಿಕಿತ್ಸೆ ನೀಡಬೇಕೆಂದು ಎಲ್ಲರಿಗೂ ಹೊರಗೆ ಹೋಗುವಂತೆ ಸೂಚಿಸಿ ಚಿಕಿತ್ಸೆ ಕೊಡುವ ನೆಪದಲ್ಲಿ ರೋಗಿಗಳ ಬಳಿಯಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಳು.
ಇದೇ ಸಮಯಕ್ಕೆ ಒಳಗೆ ಬಂದ ಶುಶ್ರೂಷಕಿ ಆ ವೈದ್ಯರು ಯಾರು ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ವೈದ್ಯರ್ಯಾರು ಬಂದಿಲ್ಲ ಎಂದು ತಿಳಿದು, ಆಕೆ ನಕಲಿ ವೈದ್ಯೆ ಎನ್ನುವುದು ಗೊತ್ತಾಗಿದೆ. ಅನುಮಾನಗೊಂಡು ಸರಸಮ್ಮ ಬಳಿ ಪರಿಶೀಲನೆ ಮಾಡಿದಾಗ ಎರಡು ಉಂಗುರ, ಕತ್ತಿನಲ್ಲಿದ್ದ ಸರ ಸೇರಿ ೪೧ ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿತ್ತು
ನಂತರ ಪೊಲೀಸರಿಗೆ ಮಾಹಿತಿ ನೀಡಿ, ವಿಚಾರಣೆ ನಡೆಸಿದಾಗ ಆಕೆ ನಕಲಿ ವೈದ್ಯೆಯಾಗಿದ್ದು, ಅಕ್ಕಪಕ್ಕದ ವಾರ್ಡ್ ಗಳಲ್ಲೂ ಇದೇ ರೀತಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೊಲೀಸರು ಆರೋಪಿ ಲಕ್ಷ್ಮೀ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯಲ್ಲಿ ಆರೋಪಿಯು ನರ್ಸ್? ಆಗಿ ಕೆಲಸ ಮಡುವ ಸ್ಥಳದಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿ ಆತ ನನ್ನ ಖಾಸಗಿ ಪೋಟೊಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾ ನಿತ್ಯವೂ ಹಣ ನೀಡುವಂತೆ ಪೀಡಿಸುತ್ತಿದ್ದ.
ಆತನಿಗೆ ಹಣ ಹೊಂದಿಸಲು ಸಂಬಳ ಸಾಕಾಗದೇ ಕಳ್ಳತನಕ್ಕೆ ವೈದ್ಯೆ ಸೋಗಿ ಇಳಿದಿದ್ದಾಗಿ ತಿಳಿಸಿದ್ದು ಅದನ್ನು ಆಧರಿಸಿ ಬ್ಲಾಕ್ ಮೇಲ್ ಮಾಡಿದ ಖದೀಮನ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.