ವೈದ್ಯರ ನೇಮಕಾತಿ ಆದೇಶಕ್ಕೆ ವೆಂಕಟೇಶ್ ಹೆಗಡೆ ಒತ್ತಾಯ

ಬಳ್ಳಾರಿ, ಮೇ.20: ರಾಜ್ಯ ಸರ್ಕಾರ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಂದರ್ಶನ ಮಾಡಿ, ದಾಖಲಾತಿ ಪರಿಶೀಲನೆ ನಡೆಸಿ, ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದ ವೈದ್ಯರಿಗೆ ಕೂಡಲೇ ನೇಮಕಾತಿ ಆದೇಶ ನೀಡಬೇಕೆಂದು ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಈಗಲೂ ಮೀನಾಮೇಷ ಎಣಿಸುವುದು ಸರಿ ಅಲ್ಲ. ಸಧ್ಯ ರಾಜ್ಯದಲ್ಲಿ ವೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ನರ್ಸುಗಳು,ಆಶಾ ಕಾರ್ಯಕರ್ತರುಗಳು ಕೋವಿಡ್ ರೋಗಿಗಳ ಚಿಕಿತ್ಸೆ ಮಾಡುತ್ತಿದ್ದಾರೆ.
ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಒಂದಿಷ್ಟು ಗಂಭೀರ ಕ್ರಮಕ್ಕೆ ಮುಂದಾಗಬೇಕಿದೆ. ಕಳೆದ ಡಿಸೆಂಬರ್ ನಲ್ಲಿ ವೈದ್ಯಾಧಿಕಾರಿಗಳ ನೇಮಕಕ್ಕೆ ರಾಜ್ಯದ 947, ಹೈದರಾಬಾದ್ ಕರ್ನಾಟಕದ 113 ವೈದ್ಯರ ಪಟ್ಟಿಯನ್ನು ಬಿಡುಗಡೆಮಾಡಿತ್ತು. ಇವರಿಗೆ ನೇಮಕಾತಿ ಆದೇಶ ಪತ್ರ ನೀಡಬೇಕಿತ್ತು. ಇವರ ಜೊತೆಗೆ ದಂತ ವೈದ್ಯಕೀಯ ವೈದ್ಯರ ನೇಮಕಕ್ಕೂ ಕ್ರಮ ವಹಿಸಲಾಗಿತ್ತು. ಆದರೆ, ಸರ್ಕಾರ ಈವರೆಗೆ ಈ ವೈದ್ಯರಿಗೆ ನೇಮಕಾತಿ ಆದೇಶ ಪತ್ರ ನೀಡಿಲ್ಲ.
ಆದರೆ ಈಗ ರಾಜ್ಯದ ಮೂಲೆ ಮೂಲೆಯಲ್ಲೂ ವೈದ್ಯರ ಕೊರತೆ ಬಹುವಾಗಿ ಕಾಡುತ್ತಿದೆ. ವೈದ್ಯರೇ ಇಲ್ಲದೇ ಆಸ್ಪತ್ರೆಗಳಲ್ಲಿ ಕೇವಲ ಔಷಧ, ಪೀಠೋಪಕರಣ ಇಟ್ಟುಕೊಂಡು ಲಕ್ಷಾಂತರ ಜನರಿಗೆ ಚಿಕಿತ್ಸೆ ಕೊಡುವುದು ಸಾಧ್ಯವಿಲ್ಲದ ಮಾತು. ಇದೇ ಕಾರಣಕ್ಕೆ ಇಂದು ರಾಜ್ಯದಲ್ಲಿ ದೊಡ್ಡ ಪ್ರಮಾಣದ ಕೋವಿಡ್ ರೋಗಿಗಳು ಸಾವಿಗೀಡಾಗುತ್ತಿದ್ದಾರೆ.
ಸರ್ಕಾರ ಇದೆಲ್ಲವನ್ನು‌ ಪರಿಗಣಿಸಿ ತಕ್ಷಣ ವೈದ್ಯರ ನೇಮಕಾತಿ ಆದೇಶ ನೀಡಬೇಕು. ಜೊತೆಗೆ ದಂತ ವೈದ್ಯಕೀಯ ವೈದ್ಯರೂ ಸಹ ಕನಿಷ್ಠ ವೈದ್ಯರ ಶಿಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ಅವರಿಗೂ ನೇಮಕಾತಿಯ ಪತ್ರವನ್ನು ನೀಡಿ ಅವರನ್ನೂ ಸಹ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಮುಂದಾಗಬೇಕು ಎಂದಿದ್ದಾರೆ.