ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಸಾವು: ವಜಾಕ್ಕೆ ಆಗ್ರಹ

ರಾಯಚೂರು, ಜ.೦೨- ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರಾಜೇಶ್ವರಿ ಎಂಬ ಯುವತಿ ಸಾವನ್ನಪ್ಪಿದ್ದು ತಪ್ಪಿತಸ್ಥ ವೈದ್ಯರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಪರ ಹೋರಾಟ ಸಮಿತಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ದಿ. ೩೦-೧೨-೨೦೨೨ ರಂದು ನಿರ್ಗತಿಕ ಬಡ ಕುಟುಂಬದ ರಾಜೇಶ್ವರಿ ಎಂಬ ಯುವತಿಯನ್ನೂ ಮೂಗಿನ ಶಸ್ತ್ರ ಚಿಕಿತ್ಸೆಗಾಗಿ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿನ ನರ್ಸ್ ಗಳು, ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೋಡದೆ, ಅವರನ್ನು ನಿರ್ಲಕ್ಷಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.
ನಿರ್ಲಕ್ಷ್ಯ ತೋರಿದ ವೈದ್ಯರಾದ ಎಂ. ಎಸ್ ಭಾಸ್ಕರ್, ಮತ್ತು ರಾಜಶೇಖರ್ ಪಾಟೀಲ್ ಸುಮಾರು ೩ರಿಂದ ೫ ವರ್ಷದ ವರೆಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾ ಕಾನೂನು ಬಾಹಿರವಾಗಿ ಅವರದ್ದೇ ಆದ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ. ಇದರಿಂದ ಬಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಬಡ ಕುಟುಂಬದ ರೋಗಿಗಳ ಜೊತೆ ಚೆಲ್ಲಾಟ ವಾಡುತ್ತಿರುವ ವೈದ್ಯರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಮೃತ ಕುಟುಂಬಕ್ಕೆ ೨೫,೦೦೦೦ ರೂ.ಪರಿಹಾರ ನಿಧಿ ನೀಡಿ,ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್ ರಾಜು, ನರಸಿಂಹಲು, ಆನಂದ್ ಏಗನೂರು, ಜೇ. ಕೃಷ್ಣಾ, ಸಿದ್ಧಾರಾಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.