ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಇಂಗಳೆ ಚಾಲನೆ

ಬಾದಾಮಿ,ಜೂ1: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಮನೆ ಮನೆ ಆರೋಗ್ಯ ತಪಾಸಣೆ ಕೈಗೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಸುಹಾಸ ಇಂಗಳೆ ಚಾಲನೆ ನೀಡಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ತಾಲೂಕಾ ಪಂಚಾಯತ, ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಗರದ ಹೊರವಲಯದ ತಾಲೂಕಾ ಮಿನಿವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡಬಹುದಾದ ಸಾಂಕ್ರಾಮಿಕ ರೋಗವಾಗಿದೆ. ಕೋವಿಡ್ ನಿಂದಾಗುವ ಪರಿಣಾಮದ ಕುರಿತು ದಿನನಿತ್ಯ ಕೇಳುತ್ತಿದ್ದೀರಿ. ನಗರದಿಂದ ಈಗ ಗ್ರಾಮ ಮಟ್ಟದಲ್ಲಿ ಈ ಸೋಂಕು ಹರಡುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೈದ್ಯರು, ನರ್ಸ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡವು ಗ್ರಾಮದ ಪ್ರತಿಯೊಂದು ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಕೈಗೊಳ್ಳಲಿದ್ದಾರೆ. ತಾಲೂಕಿನ ಎಲ್ಲ ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕು. ತಪಾಸಣೆಯಿಂದ ಆರೋಗ್ಯದ ಸ್ಥಿತಿಗತಿಗೆ ಅನುಗುಣವಾಗಿ ಔಷಧಗಳನ್ನು ಸಹ ನೀಡಲಿದ್ದಾರೆ. ಕೆಮ್ಮು, ನೆಗಡಿ, ಜ್ವರಗಳು ಬಂದಲ್ಲಿ ಔಷಧಗಳ ಕಿಟ್ ಸಹ ನೀಡಲಿದ್ದಾರೆ. ಇದರಿಂದ ಪ್ರಾರಂಭದಲ್ಲಿಯೇ ಅದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸೋಂಕು ದೇಹದೊಳಗೆ ಸೇರಿ ಉಲ್ಬಣವಾಗುವವರೆಗೆ ಬಿಡಬಾರದು ಎಂಬ ದೃಷ್ಠಿಯಿಂದ ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ವೈದ್ಯರಾದ ಡಾ.ಸುರೇಶ ಉಗಲವಾಟ, ಡಾ.ಕಿರಣ ಕುಳಗೇರಿ ಸೇರಿದಂತೆ ವೈದ್ಯ ವಿದ್ಯಾರ್ಥಿಗಳು ಹಾಜರಿದ್ದರು.