ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ

ಮಂಗಳೂರು, ಮೇ ೨೮- ದ.ಕ.ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆಗಳಲ್ಲೇ ಆರೋಗ್ಯ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಹಾಗೂ ಮಾರ್ಗ ದರ್ಶನ ನೀಡುವ ಸಲುವಾಗಿ ‘ವೈದ್ಯರ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಸರಕಾರದ ಆದೇಶದ ಅನ್ವಯ ಈ ಕಾರ್ಯಕ್ರಮದಲ್ಲಿ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವೈದ್ಯಕೀಯ ಪದವೀಧರರು, ಇನ್‌ಟರ್ನಿಗಳು, ಬಿಡಿಎಸ್, ಎಂಡಿಎಸ್, ಆಯುಷ್ ಪದವೀಧರರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಎರವಲು ಸೇವೆಯನ್ನು ಪಡೆಯಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೂಡಿ ಗ್ರಾಮೀಣ ಭಾಗಗಳಲ್ಲಿ ಭೌತಿಕ ಪರೀಕ್ಷೆ, ಗಂಟಲು ಮಾದರಿ ಪರೀಕ್ಷೆ, ಸ್ಥಳದಲ್ಲಿಯೇ ಚಿಕಿತ್ಸೆ ಮತ್ತು ಅಗತ್ಯವಿರುವವರಿಗೆ ವೈದ್ಯಕೀಯ ಕಿಟ್ ವಿತರಿಸುವರು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳನ್ನು ಗುರುತಿಸಿ ಆರ್‌ಎಟಿ ಪರೀಕ್ಷೆ ನಡೆಸಲಿದ್ದಾರೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಗುಣ ಲಕ್ಷಣ ಆಧರಿಸಿ ಹೋಂ ಐಸೋಲೇಶನ್ ಅಥವಾ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯಬೇಕೇ ಎಂಬುದರ ಬಗ್ಗೆಯೂ ಈ ತಂಡ ನಿರ್ಧರಿಸುತ್ತದೆ. ರೋಗಿಯ ಸಂಪರ್ಕದಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕಾರ್ಯಕ್ರಮಕ್ಕಿಂತ ಕನಿಷ್ಟ ಎರಡು ದಿನಗಳ ಮೊದಲು ಗ್ರಾಪಂಗಳು ಪ್ರಚಾರ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಾಡಿಗೆಗೆ ವಾಹನ ಪಡೆದು ಮೊಬೈಲ್ ಕ್ಲೀನಿಕ್ ಮಾದರಿಯಲ್ಲಿ ಕಾರ್ಯಾಚರಿಸುವಂತೆ ಮತ್ತು ಗ್ರಾಪಂಗಳ ಕಾರ್ಯಪಡೆಯ ಸದಸ್ಯರ ನೆರವು ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಕಾರಿ ಸೂಚಿಸಿದ್ದಾರೆ.