ವೈದ್ಯರು ಸದಾ ಕರ್ತವ್ಯಪ್ರಜ್ಞೆ ಮೆರೆಯಬೇಕು: ಡಾ.ಗುದಗೆ

ಬೀದರ, ಅ 27: ರೋಗಿಗಳು ವೈದ್ಯರನ್ನು ಸದಾ ದೇವರ ರೂಪದಲ್ಲಿ ನೆನಪಿಸುವ ಪರಿಪಾಠವಿದ್ದು, ವೈದ್ಯರು ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಹಾಗೂ ಕರ್ತವ್ಯಪ್ರಜ್ಞೆಯಿಂದ ಮೆರೆಯಬೇಕು ಎಂದು ಜಿಲ್ಲೆಯ ಹಿರಿಯ ತಜ್ಞವೈದ್ಯ ಹಾಗೂ 89 ನೆಯ ರಾಜ್ಯಮಟ್ಟದ ಐಎಂಎ ವೈದ್ಯರ ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಡಾ. ಚಂದ್ರಕಾಂತ ಗುದಗೆ ಅವರು ತಿಳಿಸಿದರು.
ಇಂದು ನಗರದ ಬ್ರಿಮ್ಸ್ ಕಾಲೇಜು ಆವರಣದಲ್ಲಿ 89 ನೇ ಐ ಎಂಎ ವೈದ್ಯರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರೋಗಿಯಾದವನು ವೈದ್ಯರ ಮೇಲೆ ನೂರಾರು ಭರವಸೆ ಇಟ್ಟು ಬಂದಿರುತ್ತಾನೆ.ಆತನಿಗೆ ಮೊದಲು ಚಿಕಿತ್ಸೆಗಿಂತ ಧೈರ್ಯ ಅವಶ್ಯವಿರುತ್ತದೆ.ಎಷ್ಟೋ ರೋಗಿಗಳು ವೈದ್ಯರ ಧೈರ್ಯದಿಂದ ತಮ್ಮ ಅರ್ಧದಷ್ಟು ರೋಗದಿಂದ ಚೇತರಿಸಿಕೊಳ್ಳುವರು.ಅದರಲ್ಲೂ ಮುಖ್ಯವಾಗಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಹೃದಯ ಸಂಬಂಧಿ ಕಾಯಿಲೆಯುಳ್ಳ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಅನಿವಾರ್ಯತೆ ಇದೆ.ಈ ಸಮ್ಮೇಳನದ ಮೂಲಕ ಜಿಲ್ಲೆಯ ವೈದ್ಯರಲ್ಲಿ ತಮ್ಮ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸುವ , ಯುವ ವೈದ್ಯರಿಗೆ ನುರಿತ ತರಬೇತಿ ನೀಡುವ ಅದರಲ್ಲೂ ವಿಶೇಷವಾಗಿ ಬ್ರಿಮ್ಸ್ ಆಸ್ಪತ್ರೆ ವೈದ್ಯರಲ್ಲಿ ತಮ್ಮ ಕರ್ತವ್ಯ ನಿಷ್ಠೆ ಪ್ರದರ್ಶಿಸಲು ಅನುವು ಮಾಡಿ ಕೊಡುವದಲ್ಲದೇ, ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುವ ಹಾಗೂ ಭೀಕರ ಮತ್ತು ದೀರ್ಘಕಾಲದ ರೋಗಗಳಿಗೆ ಸುಸಜ್ಜಿತ ಚಿಕಿತ್ಸೆ ನೀಡಲು ಈ ಸಮ್ಮೇಳನ ಅತ್ಯವಶ್ಯಕವಾಗಿದೆ ಎಂದರು.ಈ ಸಂದರ್ಭದಲ್ಲಿ ಡಾ.ವಿಜಯ ಭಾಸ್ಕರ್ ರೆಡ್ಡಿ, ಡಾ.ರಸಮನಗೌಡ, ಡಾ.ಕುರ್ಲಿ, ಡಾ.ಮದನಾ ವೈಜಿನಾಥ, ಡಾ.ಲಕ್ಕೋಳ, ಡಾ.ಮಲ್ಲಿಕಾರ್ಜುನ್ ಪನಶೆಟ್ಟಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ಐ.ಎಂ.ಎ ಸಂಘದ ವೈದ್ಯ ಪದಾಧಿಕಾರಿಗಳು, ಬ್ರಿಮ್ಸ್ ಬೋಧಕ ವೈದ್ಯರು, ಸಿಬ್ಬಂದಿ ಹಾಗೂ ಇತರರಿದ್ದರು.