ವೈದ್ಯರು ಪ್ರತಿಜ್ಞೆ ಮಾಡಿ, ಸಂಕಷ್ಟದ ಈ ಸಂದರ್ಭದಲ್ಲಿ ನಮ್ಮ ಕಾಯಕವನ್ನು ದ್ವಿಗುಣಗೊಳಿಸಿಃ ಶಾಸಕ ಎಂ.ಬಿ.ಪಾಟೀಲ್

ವಿಜಯಪುರ, ಮೇ.15-ಕಾಯಕ, ದಾಸೋಹಿ ಪೂಜ್ಯ ಬಸವೇಶ್ವರ ಜಯಂತಿ ಹಾಗೂ ಪವಿತ್ರ ರಂಜಾನ್ ಹಬ್ಬದ ಈ ಶುಭ ಸಂದರ್ಭದಲ್ಲಿ ವೈದ್ಯರು ಪ್ರತಿಜ್ಞೆ ಮಾಡಿ, ಸಂಕಷ್ಟದ ಈ ಸಂದರ್ಭದಲ್ಲಿ ನಾವು ನಮ್ಮ ಕಾಯಕವನ್ನು ದ್ವಿಗುಣಗೊಳಿಸಿ, ಹೆಚ್ಚು-ಹೆಚ್ಚು ರೋಗಿಗಳ ಸೇವೆ ಮಾಡಿ, ಅವರ ಕುಟುಂಬದವರ ಮುಖದಲ್ಲಿ ಮಂದಹಾಸ ಮೂಡಿಸಿದರೆ ಮಾತ್ರ ನಮ್ಮನ್ನಗಲಿದ ಡಾ.ಎಂ.ಎಸ್.ಬಿರಾದಾರ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬಿ.ಎಲ್.ಡಿ.ಇಡೀಮ್ಡ್ ವಿವಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಆಸ್ಪತ್ರೆಯ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಇದುವರೆಗೆಎಲ್ಲ ವೈದ್ಯರಿಗೆ ಮಾರ್ಗದರ್ಶಕರಾಗಿದ್ದ ಡಾ.ಎಂ.ಎಸ್.ಬಿರಾದಾರಅವರ ಆಕಸ್ಮಿಕ ಅಗಲಿಕೆಯ ನಂತರ ನಾವ್ಯಾರು ಧೃತಿಗೆಡುವುದು ಬೇಡ. ಇಂತಹ ಸಂಕಷ್ಟದ ಸಮಯದಲ್ಲಿ ನಾವು ಧೃತಿಗೆಟ್ಟು ಕೈಚೆಲ್ಲಿ ಕುಳಿತರೆ ರೋಗಿಗಳಿಗೆ ಸೇವೆ ಮಾಡುವವರು ಯಾರು ಎಂದ ಅವರು ಈ ಕೊರೊನಾ ಹೋರಾಟದಲ್ಲಿ ನಿಮ್ಮೆಲ್ಲ ವೈದ್ಯರೊಂದಿಗೆ ನಾನೇ ಮುಂದೆ ನಿಂತು ನಿಮ್ಮ ಜೊತೆಯಾಗಿ, ಕೆಲಸ ಮಾಡುತ್ತೇನೆ. ನಾವೆಲ್ಲ ಒಂದು ತಂಡವಾಗಿ ಒಮ್ಮತದಿಂದ ಈ ಸಂಕಷ್ಟವನ್ನು ಸವಾಲಾಗಿ ಸ್ವೀಕರಿಸಿ ದುಡಿಯೋಣ ಎಲ್ಲ ವೈದ್ಯರಿಂದ ನಾನು ಈ ಸೇವೆಯನ್ನು ಬಯಸುತ್ತೇನೆ ಎಂದರು.
ಇನ್ನೂ ಮುಂದೆ ಪ್ರತಿದಿನವೂ ಆಸ್ಪತ್ರೆಯ ಚಟುವಟಿಕೆಗಳ ಮೇಲೆ ನಾನು ಸ್ವತಃ ಗಮನ ಹರಿಸುತ್ತೇನೆ. ಮೇಲಿಂದ-ಮೇಲೆ ವೈದ್ಯರೊಂದಿಗೆ ಸಭೆ ನಡೆಸಿ ನಿಮ್ಮ ಸಲಹೆ ಪಡೆದು, ನಾವೆಲ್ಲರೂ ಕುಟುಂಬವಾಗಿ ಮುನ್ನೆಡೆದು, ಜನರ ಸೇವೆ ಮಾಡೋಣ ಎಂದರು.
ನನ್ನನ್ನು ಸೇರಿ ಹುದ್ದೆಗಳು, ವ್ಯಕ್ತಿಗಳು ಇಲ್ಲಿ ನೆಪ ಮಾತ್ರ. 110 ವರ್ಷಗಳ ಭವ್ಯ ಇತಿಹಾಸವಿರುವ ಬಿ.ಎಲ್.ಡಿ.ಇ ಸಂಸ್ಥೆ 30ವರ್ಷಗಳ ಇತಿಹಾಸದ ಬಿ.ಎಲ್.ಡಿ.ಇ ಆಸ್ಪತ್ರೆ ಜನರಿಗೆ ಸದಾ ಒಳಿತನ್ನೇ ಮಾಡಿದೆ. ಎಲ್ಲ ಸಂಕಷ್ಟದ ಸಂದರ್ಭಗಳಲ್ಲಿ ಸ್ವಯಂ ಮುಂದಾಗಿ ಹೆಚ್ಚೆಚ್ಚು ಸೇವೆ ನೀಡಿದೆ. ಈಗಿನ ಸಂದರ್ಭದಲ್ಲೂ ಸಹ ಅದನ್ನು ನಾವು ಚಾಲೇಂಜ್ ಆಗಿ ಸ್ವೀಕರಿಸಿ, ಸೇವೆಯನ್ನು ನೀಡೋಣ ಎಂದು ಭಾವುಕರಾಗಿ ಹೇಳಿದರು.
ನಂತರ ವೈದ್ಯರ ಪರವಾಗಿ ಮಾತನಾಡಿ ಡಾ.ಅರುಣ ಇನಾಮದಾರ, ಅಲ್ಲಮ ಪ್ರಭುಗಳ ನೀ.. ನಾ..ಎಂಬುದು ಮಾಡು. ತಾನೇ ಆಗೇ ಸಾಧ್ಯವಾಯಿತು. ಇದೇನೆಂಬೆಗುಹೇಶ್ವರಾ ಎಂಬ ವಚನ ಉಲ್ಲೇಖಿಸಿದ ಅವರು ಸಾಮೂಹಿಕ ಪ್ರಯತ್ನಗಳಿಂದ ಎಲ್ಲವನ್ನು ಮಾಡಲು ಸಾಧ್ಯಎಂಬುದು ಈ ವಚನದಲ್ಲಿದೆ. ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರು ಸ್ಥಾಪಿಸಿದ ಈ ಸಂಸ್ಥೆ ಮುನ್ನೆಡೆಸಿದ ಬಂಥನಾಳ ಸ್ವಾಮಿಗಳು, ನಮ್ಮಆಸ್ಪತ್ರೆ ಸ್ಥಾಪಿಸಿದ ಬಿ.ಎಂ.ಪಾಟೀಲರ ಆಶೀರ್ವಾದ ನಮ್ಮ ಮೇಲಿದೆ. ಎಂಥಹ ಕಠಿಣ ಪರಿಸ್ಥಿಯಲ್ಲಿ ನಾವು ವೈದ್ಯರು ಧೃತಿಗೆಡದೆ ಸಂಘಟಿತರಾಗಿ ಸೇವೆ ಮಾಡೋಣ ಎಂದರು.
ಸಮ ಉಪಕುಲಪತಿ ಡಾ.ಆರ್.ಎಸ್ ಮುಧೋಳ, ಡಾ.ಎಂ.ಎಸ್.ಬಿರಾದಾರ ಅವರ ಸೇವೆಯನ್ನು ಸ್ಮರಿಸಿ, ಕಣ್ಣಿಟ್ಟರು.ಹಿರಿಯ ವೈದ್ಯ ಡಾ.ಆರ್.ಸಿ.ಬಿದರಿ, ಡಾ.ರಾಜೇಶ ಹೊನ್ನುಟಗಿ ಮಾತನಾಡಿದರು.
ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ಆಸ್ಪತ್ರೆಯ ಎಲ್ಲ ವಿಭಾಗ ಮುಖ್ಯಸ್ಥರು, ಹಿರಿಯ ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಡಾ.ಎಂ.ಎಸ್.ಬಿರಾದಾರ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.