ವೈದ್ಯರಿಗೆ ಸಹಾಯಧನ ಸೇರಿ ಇತರೆ ಸೌಲಭ್ಯ ಒದಗಿಸಲು ರವಿ ಬೋಸರಾಜು ಆಗ್ರಹ

ರಾಯಚೂರು.ಡಿ.೦೨- ಕೊರೊನಾ ಮಹಾಮಾರಿಯ ಸಂದರ್ಭ ಸೇರಿದಂತೆ ಆಪತ್ಕಾಲದಲ್ಲಿ ವೈದ್ಯರ ಸೇವೆ ಅತ್ಯಂತ ಪ್ರಮುಖವಾಗಿದ್ದು, ಇಂತಹ ಜೀವ ರಕ್ಷಕ ಕಾರ್ಯದಲ್ಲಿ ತೊಡಗುವ ವೈದ್ಯರಿಗೆ ನೀಡಬೇಕಾದ ಸಹಾಯಧನ ಹಾಗೂ ಇನ್ನಿತರ ಸೌಕರ್ಯ ಒದಗಿಸದಿರುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ತೀವ್ರವಾಗಿ ಖಂಡಿಸಿದರು.
ವಿವಿಧ ಬೇಡಿಕೆ ಮುಂದಿಟ್ಟು, ರಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಸ್ಥಾನಿಕ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡಿದ ಅವರು, ತಕ್ಷಣವೇ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸೇವೆ ಮಾಡಿದ ವೈದ್ಯರಿಗೆ ನೀಡಬೇಕಾದ ಸಹಾಯಧನವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ವರ್ಗ ಆಪತ್ಕಾಲದಲ್ಲಿ ಆಧಾರ ಸ್ತಂಬಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಸಂಖ್ಯಾತ ಜೀವವನ್ನು ರಕ್ಷಿಸುವ ಮೂಲಕ ಅತ್ಯುತ್ತಮ ಸೇವೆ ನಿರ್ವಹಿಸುತ್ತಾರೆ.
ಇವರಿಗೆ ನೀಡಬೇಕಾದ ಸವಲತ್ತು ತಕ್ಷಣವೇ ಸರ್ಕಾರ ಬಿಡುಗಡೆಗೊಳಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ೧೦ ಸಾವಿರ ಹೆಚ್ಚುವರಿ ಸಹಾಯಧನ ಬಿಡುಗಡೆ ಮಾಡುವ ಭರವಸೆ ನೀಡಿ, ಇನ್ನೂವರೆಗೂ ಬಿಡುಗಡೆ ಮಾಡದಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ವೈದ್ಯರನ್ನು ಕೋವಿಡ್ ವಾರಿಯರ್ಸ್ ಎಂದು ಗೌರವ ತೋರುವ ಸರ್ಕಾರ, ಮತ್ತೊಂದೆಡೆ ಅವರಿಗೆ ನ್ಯಾಯಬದ್ಧವಾಗಿ ಬರಬೇಕಾದ ಸಹಾಯಧನ ಒದಗಿಸುತ್ತಿಲ್ಲ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಎರಡು ವರ್ಷ ಯಾವುದೇ ಬೋಧನೆ ಪ್ರಕ್ರಿಯೆ ನಡೆಯದಿದ್ದರೂ, ೩೦ ಸಾವಿರದಷ್ಟಿರುವ ವೈದ್ಯಕೀಯ ಶುಲ್ಕವನ್ನು ೧.೨೦ ಲಕ್ಷಕ್ಕೆ ಹೆಚ್ಚಳ ಮಾಡಿ, ವಿದ್ಯಾರ್ಥಿಗಳ ಮೇಲೆ ಹೊರೆ ಹಾಕಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದೆಡೆ ಹೆಚ್ಚುವರಿ ಶುಲ್ಕ ಸಂಗ್ರಹದ ವಿರುದ್ಧ ಆಕ್ಷೇಪ ಮಾಡುವ ಸರ್ಕಾರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಿಸುವ ಮೂಲಕ ಬಡ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ಗುರಿ ಮಾಡುತ್ತಿದೆ. ದೇಶದಲ್ಲಿಯೇ ಅತ್ಯಂತ ಕಡಿಮೆ ವೈದ್ಯಕೀಯ ವಿದ್ಯಾರ್ಥಿ ವೇತನ ನೀಡುವ ರಾಜ್ಯ ಸರ್ಕಾರ ಇಲ್ಲಿವರೆಗೂ ಈ ಹಣವನ್ನು ಬಿಡುಗಡೆ ಮಾಡಿಲ್ಲವೆಂದು ದೂರಿದರು.