ವೈದ್ಯರಿಗೆ ಪ್ರತಿ ಕ್ಷಣವೂ ಹೊಸ ಸವಾಲು

(ಸಂಜೆವಾಣಿ ನ್ಯೂಸ್)
ತುಮಕೂರು, ಜು. ೧- ಪ್ರತಿ ವರ್ಷದಂತೆ ಈ ವರ್ಷವೂ ವೈದ್ಯರ ದಿನ ಬಂದಿದೆ. ಪ್ರತಿ ವರ್ಷವು ವೈದ್ಯರಾದ ನಾವು ನಮ್ಮೆಲ್ಲಾ ಮಾತುಗಳನ್ನು ಹೇಳಿಕೊಳ್ಳಲು ಇಂತಹ ಒಂದು ದಿನಕ್ಕಾಗಿ ಕಾದಿರುತ್ತೇವೆ. ಬಹುಶಃ ವೈದ್ಯರಿಗೆ ತಮ್ಮ ಸ್ವಾಗತವನ್ನು ಹೇಳಿಕೊಳ್ಳಲು ಇಂತಹ ಬೇರೆ ಅವಕಾಶಗಳು ಸಿಗುವುದಿಲ್ಲ. ಆಧುನಿಕ ವೈದ್ಯರ ಮನಸ್ಥಿತಿಗಳ ಬಗ್ಗೆ ಹಾಗೂ ಜನರಲ್ಲಿ ಬದಲಾಗುತ್ತಿರುವ ವಿವಿಧ ದೃಷ್ಟಿಕೋನಗಳ ಬಗ್ಗೆ ಇಂದು ನಾವು ಮಾತನಾಡಬೇಕಿದೆ.
ಮನುಷ್ಯ, ಸಮುದಾಯದಿಂದಲೇ ರೂಪುಗೊಂಡ ಜೀವಿ. ಆದರೆ ಕಳೆದ ಎರಡು ಮೂರು ದಶಕಗಳಿಂದ ಸಮುದಾಯ ಪ್ರಜ್ಞೆ ಆಧುನಿಕ ತಂತ್ರಜ್ಞಾನದ ವೇಗದಲ್ಲಿ ಬದಲಾಗುತ್ತಿರುವಂತೆ ಕಾಣುತ್ತಿದೆ. ಇದು ಆತಂಕಕ್ಕೂ ಕಾರಣವಾಗಿದೆ. ನವ ಸಮುದಾಯವಾದ ಸೃಷ್ಠಿಯಾಗುತ್ತಿದೆ. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬವಾಗಿ ವಿಘಟನೆಯಾಗುತ್ತಿರುವ ಈ ಸಂದರ್ಭದಲ್ಲಿ ನಾವು ಬಳಸುವ ತಂತ್ರಜ್ಞಾನದ ಬೇಲಿ ವಿಭಕ್ತ ಕುಟುಂಬದ ಬಾಂಧವ್ಯಗಳಿಗೆ ಅಡ್ಡಗೋಡೆಯಾಗಿ ಸೃಷ್ಟಿಯಾಗಿದೆ. ತಂದೆ-ತಾಯಿ, ಮಕ್ಕಳ ನಡುವೆಯೇ ಒಂದು ಕಂದಕ ಸೃಷ್ಠಿಯಾಗುತ್ತಿದೆ.
ಹುಟ್ಟಿದಾಗಿನಿಂದಲೇ ತಂತ್ರಜ್ಞಾನದ ಸಮೂಹ ಸನ್ನಿಗೆ ಒಳಗಾದ ಯುವಜನತೆ ಭವಿಷ್ಯದಲ್ಲಿ ವೈದ್ಯರಾದಾಗ ಅವರಿಂದ ವಾತ್ಸಲ್ಯ, ರೋಗಿಗಳ ಕಷ್ಟ ಸುಖದ ಪರಿಜ್ಞಾನವೇ ಇಲ್ಲದಂತೆ ವರ್ತಿಸುತ್ತಿರುವುದು ಹೊಸ ತಲೆಮಾರಿನ ವೈದ್ಯಕೀಯ ಲೋಕಕ್ಕೆ ಹೊಸ ಸವಾಲು ಆಗಿದೆ. ನಾವು ಅತ್ಯಂತ ಯಶಸ್ವಿ ವೈದ್ಯರನ್ನು ಗುರುತಿಸುವವಾಗ ಅವರ ಡಿಗ್ರಿಗಳನ್ನು ಗುರುತಿಸುತ್ತೇವೆ. ಆದರೆ ಅವರಲ್ಲಿನ ಸಹಾನುಭೂತಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ನಿರ್ವಹಿಸಲು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಸಮುದಾಯ ಪ್ರೇಮವನ್ನು ಮೈಗೂಡಿಸಿಕೊಳ್ಳವಂತೆ ಮಾಡಬೇಕಿರುವುದು ಶಿಕ್ಷಣ ಕ್ಷೇತ್ರಕ್ಕಿರುವ ಹೊಸ ಸವಾಲು. ಇದು ಕೇವಲ ವೈದ್ಯರ ವಿಷಯಕ್ಕೆ ಸೀಮಿತಗೊಳಿಸದೆ ಭವಿಷ್ಯದ ಚುಕ್ಕಾಣಿ ಹಿಡಿಯುವ ಎಲ್ಲರಲ್ಲಿಯೂ ಮೂಡಿಸಬೇಕಿರುವುದು ಹೊಸ ಹೊಣೆಯಾಗಿದೆ.
ಆಶಾದಾಯಕ ಬೆಳವಣಿಗೆಯೇ ಚಿಮ್ಮು ಹಲಗೆ
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸರಳೀಕರಣಗೊಳಿಸಿದ ಹೊಸ ನಿಯಮಗಳ ಪ್ರಕಾರ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಹೊಸ ಹಾದಿ ದೊರೆತಂತಾಗಿದೆ. ನಮ್ಮ ಸಿದ್ಧಗಂಗಾ ಆಸ್ಪತ್ರೆಯೂ ಕೂಡ ಅನೇಕ ವರ್ಷಗಳಿಂದ ಪೂಜ್ಯರ ಪ್ರಯತ್ನದ ಹೊರತಾಗಿಯೂ ನಿಯಮಗಳ ಅಡೆತಡೆಯಿಂದ ಕನಸು ಕೈಗೂಡಿರಲಿಲ್ಲ. ಇದೀಗ ಕಾಲೇಜು ಆರಂಭವಾಗಿ ಮೊದಲ ವರ್ಷವನ್ನು ಯಶಸ್ವಿಯಾಗಿ ಮುಗಿಸುವ ಸನಿಹದಲ್ಲಿದ್ದೇವೆ.
ಇಂತಹ ಸರಳೀಕೃತ ನಿಯಮಗಳಿಂದ ಭಾರತೀಯ ವೈದ್ಯಕೀಯ ಲೋಕದಲ್ಲಿ ಜಿಲ್ಲಾ ಹಂತದಲ್ಲಿಯೇ ಎರಡರಿಂದ ಮೂರು ಮೆಡಿಕಲ್ ಕಾಲೇಜುಗಳ ನಿರ್ಮಾಣ ಸಾಧ್ಯವಾಗುತ್ತಿದೆ. ಇದರಿಂದ ವೈದ್ಯಕೀಯ ಜಗತ್ತಿಗೆ ಆಗಮಿಸುವ ವೈದ್ಯರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ, ಭವಿಷ್ಯಕ್ಕೆ ಬೇಕಿರುವ ಪೂರಕ ವೈದ್ಯರ ವ್ಯವಸ್ಥೆ ಒಂದೆಡೆ ಸೃಷ್ಟಿಯಾದರೆ ಇನ್ನೊಂದಡೆ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ಎಲ್ಲಾ ಶಕ್ತಿ ನಮಗೆ ದೊರೆಯಲಿದೆ. ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಯ ವೈದ್ಯನಾಗುವ ಕನಸೂ ಕೂಡ ಈಡೇರಲಿದೆ.
ಬದಲಾಗಬೇಕಿದೆ ಜನರ ದೃಷ್ಟಿಕೋನ
ವೈದ್ಯಕೀಯ ವಿಜ್ಞಾನಕ್ಕೆ ಬೆಳವಣಿಗೆಯ ಹೊಸ ಅವಕಾಶಗಳು ಸಿಕ್ಕಂತೆಯೇ ಜನರಿಗೆ ಹೊಸ ತಂತ್ರಜ್ಞಾನದ ನೆರವಿನಿಂದ ತಮ್ಮ ರೋಗವನ್ನು ತಾವೇ ರಿಪೇರಿ ಮಾಡಿಕೊಳ್ಳುವಂತಹ ಗೂಗಲ್ ಡಾಕ್ಟರ್‌ಗಳ ಉದಯವಾಗುತ್ತಿದೆ. ಇದು ಎಷ್ಟು ಅಪಾಯಕಾರಿ ಎಂಬುದು ಗೊತ್ತಾಗುವುದು ಅವರು ತಪ್ಪು ಔಷಧಿಯ ಸೇವನೆಯಿಂದ ಹಾಸಿಗೆ ಹಿಡಿದು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗಲೇ!
ಹೌದು. ಇಂತಹ ಸ್ವಯಂ ವೈದ್ಯ ಪದ್ದತಿ ಭಾರತದಲ್ಲಿ ೪೦ ವರ್ಷಗಳ ಕಡಿಮೆ ವಯಸ್ಸಿನ ಶೇ. ೧೧.೯ ರಷ್ಟು ಜನರು ಉಪಯೋಗಿಸುತ್ತಿದ್ದಾರೆ ಎಂಬುದಾಗಿ ಹೇಳಿರುವ ಇತ್ತೀಚಿನ ಅಧ್ಯಯನಗಳೇ ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ಅಪಾಯಕ್ಕೆ ಒಳಗಾಗುವವರು ಅಂದಾಜು ಶೇ. ೬ ಕ್ಕಿಂತ ಹೆಚ್ಚು.
ಇನ್ನೊಂದಡೆ ವೈದ್ಯರು ನೀಡುವ ಔಷಧಿಗಳನ್ನು ವಾರೆಗಣ್ಣಿನಿಂದ ನೋಡುವುದು, ಅವರು ನೀಡಿದ ಮಾತ್ರೆಗಳನ್ನು ಗೂಗಲ್ ಮಾಡಿ ಅದರ ಸೈಡ್ ಎಫೆಕ್ಟ್ ಏನು? ಏನಕ್ಕೆ ನೀಡಿದ್ದಾರೆ? ಹೀಗೆ ತರಾವರಿ ಪ್ರಶ್ನೆಗಳನ್ನು ತಲೆಗೆ ತುಂಬಿಕೊಂಡು ಪರಿತಪಿಸಿ ಮಾತ್ರೆಯ ಪರಿಣಾಮವನ್ನೇ ಕಡಿಮೆ ಮಾಡುವಂತೆ ಮಾಡಿದೆ. ಅಧ್ಯಯನದ ದೃಷ್ಟಿಯಿಂದ ಇದು ಒಳ್ಳೆಯದೇ ಆದರೂ ೭ ರಿಂದ ೮ ವರ್ಷಗಳ ಕಾಲ ವಿವಿಧ ಪದವಿಗಳನ್ನು ಮುಗಿಸಿ ವೈದ್ಯರಾದವರ ಅನುಭವ ಹಾಗೂ ತಿಳುವಳಿಕೆಯನ್ನೇ ಅನುಮಾನಿಸುವುದು ಎಷ್ಟು ಸರಿ ಎಂಬುದನ್ನು ಆಲೋಚಿಸಬೇಕಿದೆ. ಜತೆಗೆ ಇಂತಹ ಸ್ವಯಂ ವೈದ್ಯ ಪದ್ಧತಿ, ಅರೆ ಜ್ಞಾನದ ಪರಿಣಾಮಗಳ ವೈದ್ಯರ ಮೇಲಿನ ದೌರ್ಜನ್ಯಗಳಿಗೆ ಕಾರಣವಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಘ ತಿಳಿಸಿದಂತೆ ಶೇ. ೭೫ ರಷ್ಟು ವೈದ್ಯರು ರೋಗಿಗಳು ನೀಡುವ ವಿವಿಧ ಮಾನಸಿಕ ಹಾಗೂ ದೈಹಿಕ ದೌರ್ಜನ್ಯದಿಂದ ಒತ್ತಡಕ್ಕೆ ಒಳಗಾಗಿದ್ದಾರಂತೆ. ಇದೆಲ್ಲವೂ ನಾನು ಮೇಲೆ ಹೇಳಿದಂತಹ ಕಾರಣದಿಂದ.
ವೈದ್ಯರುಗಳ ನಡುವೆಯೇ ಇರುವ ಅವಿಶ್ವಾಸ, ಆಸ್ಪತ್ರೆ ಹಾಗೂ ಆಸ್ಪತ್ರೆಗಳ ನಡುವೆ ಉಂಟಾಗುತ್ತಿರುವ ಸ್ಪರ್ಧೆ, ರೋಗಿಗಳನ್ನು ದಿಕ್ಕು ತಪ್ಪಿಸುವಂತಹ ಕೆಲವೊಂದು ವಾತಾವರಣಗಳು ವೈದ್ಯಕೀಯ ಲೋಕದಲ್ಲಿ ಹೆಚ್ಚುತ್ತಿರುವ ಹೊಸ ಸವಾಲುಗಳು.
ಒಟ್ಟಾರೆ, ವೈದ್ಯಕೀಯ ಪರಿಸರ ಸ್ವಚ್ಛ ಹಾಗೂ ನಿರ್ಮಲವಾಗಬೇಕಿದೆ. ಸಹಾನುಭೂತಿಯ ವೈದ್ಯರುಗಳು ಅರಳಬೇಕಿದೆ. ವೈದ್ಯನನ್ನು ಒಬ್ಬ ಆತ್ಯಾಪ್ತ ಸಲಹೆಗಾರ, ಮಾರ್ಗದರ್ಶಿಯನ್ನಾಗಿ ರೋಗಿಗಳು ಗುರುತಿಸಬೇಕಿದೆ. ನನ್ನ ಇಷ್ಟು ವರ್ಷದ ಅನುಭವದಲ್ಲಿ ಯಾವ ವೈದ್ಯನೂ ತನ್ನ ರೋಗಿಗೆ ಕೆಟ್ಟದ್ದನ್ನು ಭಯಸುವುದಿಲ್ಲ. ಹಗಲು ರಾತ್ರಿ ನಿದ್ದೆಯನ್ನು ಬಿಟ್ಟು, ಕುಟುಂಬವನ್ನು ಬಿಟ್ಟು, ರೋಗಿಗಳ ಸೇವೆಯಲ್ಲಿ ಸದಾ ತೊಡಗಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿ ಸುಧೀರ್ಘ ಆರೋಗ್ಯವನ್ನು ಬಯಸುವ ವೈದ್ಯಕುಲವನ್ನು ಗೌರವದಿಂದ ಕಾಣಬೇಕಿದೆ.
ವೈದ್ಯರನ್ನು ದೇವರನ್ನಾಗಿಸಬೇಡಿ, ಒಂದು ವೇಳೆ ದೇವರು ರೋಗಿಯ ಸಾವನ್ನು ನಿರ್ಧರಿಸಿದರೂ ಕೂಡ ವೈದ್ಯ ದೇವರ ಅಭಿಪ್ರಾಯವನ್ನೇ ತನ್ನ ಚಿಕಿತ್ಸೆಯ ಮೂಲಕ ಬದಲಿಸಿ ದೇವರಿಗಿಂತ ದೊಡ್ಡವನಾಗಿ ಬಿಡುತ್ತಾನೆ. ಎಲ್ಲಾ ವೈದ್ಯ ಕುಲಕ್ಕೆ ವೈದ್ಯರ ದಿನದ ಶುಭಾಶಯಗಳು.