ವೈದ್ಯರಿಗೆ ಗ್ರಾಮೀಣ ಸೇವೆ ರದ್ದು: ಜೈನ್ ಕಿಡಿ

ರಾಯಚೂರು.ಅ.೨೦- ವೈದ್ಯಕೀಯ ಪದವೀಧರರಿಗೆ ನಿಗದಿಪಡಿಸಿದ್ದ ಗ್ರಾಮೀಣ ಸೇವೆ ರದ್ದುಗೊಳಿಸಿದ ಸರ್ಕಾರದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮತ್ತು ರಾಜ್ಯಸಂಘಟನಾ ಕಾರ್ಯದರ್ಶಿ ಅಶೋಕ್‌ಕುಮಾರ್, ಸಿ.ಕೆ.ಜೈನ್ ತೀವ್ರವಾಗಿ ಖಂಡಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ವೈದ್ಯಕೀಯ ಸೌಲಭ್ಯದಲ್ಲಿ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ನೂತನವಾಗಿ ವೈದ್ಯಕೀಯ ಪದವಿ ಪೂರೈಸಿದ ವೈದ್ಯರುಗಳಿಗೆ ಸರ್ಕರ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿ ಆದೇಶ ನೀಡಿತ್ತು. ಆದರೆ, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಸೇವೆ ಕಡ್ಡಾಯವಲ್ಲ ಎಂದು ತೀರ್ಮಾನ ಕೈಗೊಂಡಿರುವುದು ಮತ್ತೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ವೈದ್ಯಕೀಯ ಸೌಲಭ್ಯಗಳಿಗೆ ಕೊರತೆಯುಂಟಾಗಲಿದೆ ಎಂದು ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆ, ಅಪೌಷ್ಠಿಕತೆ ಹಾಗೂ ಇನ್ನಿತರ ವಾತಾವರಣದ ಸಮಸ್ಯೆಗಳಿಂದ ಸಹಜವಾಗಿಯೇ ಅನಾರೋಗ್ಯಕ್ಕೆ ಜನತೆ ತುತ್ತಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಬಂದು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆಯನ್ನು ಮತ್ತೊಮ್ಮೆ ಸರ್ಕಾರ ಸೃಷ್ಟಿಸಿದೆ. ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯ ಸ್ಥತಿಗತಿಗಳನ್ನು ಗಂಭೀರವಾಗಿ ಪರಗಣಿಸಬೇಕಾದ ಸರ್ಕಾರ, ಇಂತಹ ತೀರ್ಮಾನದಿಂದ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದೆ ಎಂದು ಆರೋಪಿಸಿರುವ ಜೈನ್, ತಕ್ಷಣ ಸಚಿವ ಸಂಪುಟದಲ್ಲಿ ಕೈಗೊಂಡಿರುವ ತೀರ್ಮಾನವನ್ನು ರದ್ದುಗೊಳಿಸಿ ಈ ಹಿಂದಿನಂತೆ ನೂತನ ವೈದ್ಯಕೀಯ ಪದವೀಧರರು ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಲು ಮುಂದಾಗದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದೆಂದು ಪ್ರಕಟಣೆ ಮೂಲಕ ಸರ್ಕಾರಕ್ಕೆ ಜೈನ್ ಎಚ್ಚರಿಕೆ ನೀಡಿದ್ದಾರೆ.