ವೈದ್ಯರಿಗೆ ಅರ್ಹತಾ ಪರೀಕ್ಷೆ ಫಿಕ್ಸ್

ನವದೆಹಲಿ,ಜೂ.೨೮- ವೈದ್ಯಕೀಯ ಪದವೀಧರರಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯಾದ ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್) ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ರಾಯೋಗಿಕ ದಿನಾಂಕ ಪ್ರಕಟಿಸಿದೆ.ಮೊದಲ ಬಾರಿಗೆ ಬಾರಿಗೆ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟಿಸಿದ್ದು ನೆಕ್ಸ್ಟ್ ಭಾರತದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯುವ ಮೊದಲ ಹಂತವು ಬಹು ಆಯ್ಕೆಯ ಪ್ರಶ್ನೆಗಳನ್ನು ಆಧರಿಸಿರುತ್ತದೆ. ಇಂಟರ್ನ್‌ಶಿಪ್ ಪೂರ್ಣಗೊಂಡ ನಂತರ ನವೆಂಬರ್‌ನಲ್ಲಿ ನಡೆಸಲಾಗುವ ಎರಡನೇ ಹಂತವು ಸಮಗ್ರ ಪ್ರಾಯೋಗಿಕ ,ಮತ್ತು ಕ್ಲಿನಿಕಲ್ ಪರೀಕ್ಷೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.ವೈದ್ಯಕೀಯ ರೋಗನಿರ್ಣಯ, ರೋಗಿಯ ಪರೀಕ್ಷೆ ಮತ್ತು ಕ್ಲಿನಿಕಲ್ ನಿರ್ಧಾರ-ಮಾಡುವಿಕೆ, ಆಧುನಿಕ ವೈದ್ಯಕೀಯ ಪದ್ಧತಿಯ ಅಭ್ಯಾಸಕ್ಕೆ ಅಗತ್ಯವಾದ ಪ್ರಾಯೋಗಿಕ ಮತ್ತು ಸಂವಹನ ಕೌಶಲ್ಯಗಳಲ್ಲಿನ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುವ ಪರೀಕ್ಷೆ ಇದಾಗಿದೆ.ನೆಕ್ಟ್ ಆಧುನಿಕ ಔಷಧವನ್ನು ಅಭ್ಯಾಸ ಮಾಡಲು ಪರವಾನಗಿ ಪರೀಕ್ಷೆಯಾಗಿ ಕಾರ್ಯನಿರ್ವಹಿಸಲಿದೆ ಜೊತೆಗೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಹತೆ ಆಧಾರಿತ ಪ್ರವೇಶಕ್ಕಾಗಿ ಮತ್ತು ಭಾರತದಲ್ಲಿ ಅಭ್ಯಾಸ ಮಾಡಲು ಬಯಸುವ ವಿದೇಶಿ ವೈದ್ಯಕೀಯ ಪದವೀಧರರಿಗೆ ಪ್ರಾಯೋಗಿಕ ಪರೀಕ್ಷೆ ಕೂಡ ಆಗಿದೆ ಎಂದು ತಿಳಿಸಿದ್ದಾರೆ.ಎನ್‌ಎಂಸಿ ಅಧ್ಯಕ್ಷ ಡಾ ಎಸ್ ಸಿ ಶರ್ಮಾ ಮಾಹಿತಿ ನೀಡಿ ವ್ಯವಸ್ಥೆಯನ್ನು ಪರೀಕ್ಷಿಸಲು ಜುಲೈ ೨೮ ರಂದು ಅಣಕು ಪರೀಕ್ಷೆ ಯೋಜಿಸಲಾಗಿದೆ. ದೆಹಲಿಯ ಏಮ್ಸ್ ನಡೆಸುವ ಅಣಕು ಪರೀಕ್ಷೆಯ ನೋಂದಣಿ ಇಂದಿನಿಂದ ಪ್ರಾರಂಭವಾಗುತ್ತದೆ ಎಂದಿದ್ದಾರೆ.ಎಂಬಿಬಿಎಸ್ ಕೋರ್ಸ್‌ಗಳನ್ನು ಅನುಸರಿಸುವ ಅಂತಿಮ ವರ್ಷದ ವಿದ್ಯಾರ್ಥಿಗಳು ಮಾತ್ರ ಇಂತಹ ಅಣಕು ಪರೀಕ್ಷೆಗಳಿಗೆ ಅರ್ಹರು” ಎಂದು ಅವರು ಹೇಳಿದ್ದಾರೆ.ಇಲ್ಲಿಯವರೆಗೆ ಎಂಬಿಬಿಎಸ್ ಪದವೀಧರರು ಥಿಯರಿ ಮತ್ತು ಪ್ರಾಯೋಗಿಕ ಎರಡನ್ನೂ ಒಳಗೊಂಡಿರುವ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಿತ್ತು. ಇದನ್ನು ಕಾಲೇಜುಗಳು,ವಿಶ್ವವಿದ್ಯಾಲಯಗಳು ನಡೆಸುತ್ತವೆ. ಮುಂದೆ ಕೇಂದ್ರೀಕೃತ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.