ವೈದ್ಯರನ್ನು ದೇವರೆಂದು ಕಾಣಬೇಕು

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು2: ವೈದ್ಯರಾದವರು ತಂದೆ-ತಾಯಿಗೆ ಸುಳ್ಳು ಹೇಳಬಹುದು ಆದರೆ ರೋಗಿಗಳಿಗೆ ಎಂದೂ ಸುಳ್ಳು ಹೇಳುವುದಿಲ್ಲ. ಅಂತಹ ಪ್ರಸಂಗ ನಡೆದರೆ ರೋಗಿಯು ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕಿತ್ತೂರಿನ ಶಕುಂತಲಾ ಗ್ರಾಮೀಣ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಸಿಗೆ ನೀರುಣಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯರನ್ನು ದೇವರೆಂದು ಕಾಣಬೇಕೆಂದರು.
ಅತಿಥಿಯಾಗಿ ತಾಲೂಕಾ ವೈದ್ಯಾಧಿಕಾರಿ ಎಸ್.ಎಸ್.ಸಿದ್ದನವರ ಮಾತನಾಡಿ ಇಂದಿನ ಸಮಾಜದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿವೆ ಅದಾಗಬಾರದು. ಏಕೆಂದರೆ ವೈದ್ಯರ ರಕ್ಷಿಸಿದರೆ ನಮ್ಮ ಜೀವ ಕಾಪಾಡುತ್ತಾರೆ. ಕೊರೊನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಜೀವ ಕಾಪಾಡಿದ್ದಾರೆ ಅದಕ್ಕಾಗಿ ಸಮಾಜದಲ್ಲಿ ವೈದ್ಯರನ್ನು ಗೌರವದಿಂದ ಕಾಣಬೇಕೆಂದರು.
ಅಧ್ಯಕ್ಷಸ್ಥಾನ ವಹಿಸಿಕೊಂಡು ಶಕುಂತಲಾ ಗ್ರಾಮೀಣ ಆಸ್ಪತ್ರೆಯ ಸಂಸ್ಥಾಪಕ ವೀರಭದ್ರಪ್ಪ.ಎ.ಗಡಗಿ ಮಾತನಾಡಿ, ವೈದ್ಯೋ ನಾರಾಯಣ ಹರಿ ಎಂಬ ಸರ್ವಕಾಲಿನ ಮಾತಿದೆ. ವೈದ್ಯರು ವೃತ್ತಿಯೆಂದು ಮಾಡಬಾರದು. ಇದೊಂದು ಜೀವ ಬದುಕಿಸುವಲ್ಲಿ ಪ್ರಾಮಾಣಿಕ ಶ್ರಮ.
ಅವರು ತೋರುವ ಸೇವೆ ಹಾಗೂ ಚಿಕಿತ್ಸೆ ಸಾವನ್ನು ಕೂಡಾ ಮುಂದೂಡಿ ಮರುಜನ್ಮ ನೀಡಬಲ್ಲದು. ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ವೈದ್ಯರ ಪಾತ್ರ ಮಹತ್ವದ್ದು. ಆದ್ದರಿಂದ ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಪ್ರತಿಯೊಬ್ಬ ವೈದ್ಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಆರ್ಶೀವಚನ ನೀಡಿ ಮಾತನಾಡಿದ ಗಂದಿಗವಾಡದ ಮೃತ್ಯುಂಜಯ ಹಿರೇಮಠ ಸ್ವಾಮಿಜೀ ವೃತ್ತಿ ಜೊತೆ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿದೆ.
ವೈದ್ಯರು ದೇವತೆಗಳಿದ್ದಂತೆ. ವೈದ್ಯಕೀಯ ವೃತ್ತಿ ಪವಿತ್ರವಾದದ್ದು. ಸಮಾಜದಲ್ಲಿ ವೈದ್ಯಕೀಯ ವೃತ್ತಿ ಪ್ರಪಂಚದ ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ವೈದ್ಯರು ತಮ್ಮ ವೈಯಕ್ತಿಕ ಜವಾಬ್ದಾರಿ, ಸಂಬಂಧ, ಮತ್ತು ಅವರ ಯೋಗಕ್ಷೇಮವನ್ನು ತ್ಯಾಗ ಮಾಡುತ್ತಾರೆ ಎಂದರು.
ಐತಿಹಾಸಿಕ ಸ್ಥಳ ಕಿತ್ತೂರನಲ್ಲಿ ಎಲ್ಲ ರೋಗಗಳಿಗೆ ಒಂದೆ ಸೂರಿನಡಿ ಚಿಕಿತ್ಸೆ ದೊರೆಯುವ ದೊಡ್ಡ ಆಸ್ಪತ್ರೆ ಇರಲಿಲ್ಲ. ಈ ಕೊರತೆಯನ್ನು ನೀಗಿಸಿದ ಕೀರ್ತಿ ಡಾ.ವೀ.ಎ.ಗಡಗಿ ಹಾಗೂ ಯುವ ವೈದ್ಯ ತಂಡಕ್ಕೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಅವರು ಸೇವೆಗೈದು ನಿವೃತ್ತಿ ಹೊಂದಿದ ಪಟ್ಟಣಕ್ಕೆ ಅವರದೊಂದು ಅಳಿಲು ಸೇವೆ ಇರಲೆಂದು ಈ ಆಸ್ಪತ್ರೆಯನ್ನು ಸ್ಥಾಪಿಸಿದರು ಎಂದು ನುಡಿದರು.
ಲೇಖಕಿ ಶ್ರೀಮತಿ ಸಾವಿತ್ರಿ ಹೊತ್ತಗಿಮಠ ರಚಿರುವ ವೈದ್ಯ ಪ್ರಭೆ ಪುಸ್ತಕ ಬಿಡುಗಡೆಗೊಳಿಸಿ ಗಣ್ಯರನ್ನು ಮತ್ತು ವೈದ್ಯರನ್ನು ಸತ್ಕರಿಸಲಾಯಿತು. ಪ್ರಾರ್ಥನಾ ಗೀತೆ ಸವಿತಾ ಪಾಟೀಲ ಸಂಗಡಿಗರಿಂದ ನಡೆಯಿತು.
ಈ ಸಂದರ್ಭದಲ್ಲಿ ಡಾ.ವಿಜಯ ಗಡಗಿ, ಡಾ.ಚಂದ್ರಗೌಡ ಪೋಲಿಸಪಾಟೀಲ, ಡಾ.ಮೃತ್ಯುಂಜಯ ಗುತ್ತಲ, ಡಾ.ಎಂ.ಎಸ್.ಹೊತ್ತಗಿಮಠ, ಡಾ.ಡಿ.ಬಿ.ದೇಸಾಯಿ, ಡಾ.ಎಸ್.ಎಸ್.ಬೆಂಬಳಗಿ, ಡಾ. ಎಂ,ಎಸ್.ರಾಠೋಡ, ಡಾ. ರಮೇಶ ಚೆಲವನ್ನವರ, ಕುಮಾರಿ ಡಾ. ರಕ್ಷಿತಾ ಸುರಗಿಮಠ, ಡಾ. ಬಸವರಾಜ ಪರವಣ್ಣವರ, ಡಾ. ವೆಂಕಟೇಶ ಉಣಕಲಕರ, ಡಾ. ಮಹಾಂತೇಶ ಕಲ್ಮಠ, ಸಂಗಪ್ಪ ಹಡಪದ, ಪ.ಪಂ. ಸದಸ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕರಿದ್ದರು.
ಸ್ವಾಗತ ಮತ್ತು ವಂದನಾರ್ಪಣೆ ವೀರಯ್ಯಾ ಹಿರೇಮಠ, ನಿರೂಪಣೆ ಪ್ರೋ. ಬಸವರಾಜ ಕುಪ್ಪಸಗೌಡರ ನೆರವೇರಿಸಿದರು.