ವೈದ್ಯಕೀಯ ಸಿಬ್ಬಂದಿ ಯಡವಟ್ಟು: ಬಾಣಂತಿ ಸಾವುಜಿಲ್ಲಾ ಆಸ್ಪತ್ರೆ ನಾಲ್ವರು ಸಿಬ್ಬಂದಿ ಅಮಾನತು

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ20: ನಗರದ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಯಡವಟ್ಟಿನಿಂದ ಬಾಣಂತಿಯೊಬ್ಬಳ ಆರೋಗ್ಯದಲ್ಲಿ ಏರುಪೇರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಕಳೆದ ಫೆ. 23 ರಂದು ಬಬಲೇಶ್ವರ ತಾಲೂಕು ದದಾಮಟ್ಟಿಯ ಶಾರದಾ ಮಲ್ಲಿಕಾರ್ಜುನ ದೊಡಮನಿ ಎಂಬ ಮಹಿಳೆ ಹೆರಿಗೆಗಾಗಿ ಜಿಲ್ಲಾಸತ್ರೆಗೆ ದಾಖಲಾಗಿ, ಅವಳಿ ಜವಳಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಳು.
ಆಗ ತೀವ್ರ ರಕ್ತಸ್ರಾವದಿಂದ ಅಸ್ವಸ್ತಗೊಂಡಾಗ, ಬಾಣಂತಿಗೆ ರಕ್ತ ನೀಡುವಂತೆ ಡಾಕ್ಟರ್ ಬರೆದು ಕೊಟ್ಟಿದ್ದಾರೆ.
ಈ ಸಂದರ್ಭ ಬಾಣಂತಿಗೆ ಎ ಪಾಸಿಟಿವ್ ರಕ್ತದ ಬದಲು ಬಿ ಪಾಸಿಟಿವ್ ರಕ್ತ ನೀಡಿ, ರಕ್ತ ನಿಧಿ ಸಿಬ್ಬಂದಿ ಯಡವಟ್ಟು ಮಾಡಿದ್ದು, ಬೇರೆ ಗುಂಪಿನ ರಕ್ತವನ್ನು ಬಾಣಂತಿಯ ದೇಹಕ್ಕೆ ಸೇರುತ್ತಿದ್ದಂತೆ, ರಿಯಾಕ್ಷನ್ ಉಂಟಾಗಿ, ಬಾಣಂತಿ ತೀವ್ರ ಅಸ್ವಸ್ತಗೊಂಡಿದ್ದು, ಬಳಿಕ ಜಿಲ್ಲಾಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಚಿಕಿತ್ಸೆ ಫಲಿಸದೇ ಬಾಣಂತಿ ಅಸುನೀಗಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದ್ದು, ಇನ್ನು ಶವ ಪರೀಕ್ಷೆ ವರದಿಯಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಲ್ಲಿ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಸಂಜೆವಾಣಿಗೆ ತಿಳಿಸಿದ್ದಾರೆ.