
ಕಲಬುರಗಿ,ಮಾ.2-ತೆಲಂಗಾಣದ ವೈದ್ಯಕೀಯ ವಿದ್ಯಾರ್ಥಿನಿ ಡಾ.ಪ್ರೀತಿ ಸಾವಿನ ಬಗ್ಗೆ ಕೂಡಲೇ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ.ಆಗ್ರಹಿಸಿದರು.
ತೆಲಂಗಾಣದ ಒರಂಗಲ್ ಜಿಲ್ಲೆಯ ಕಾಕತಿಯ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕ ವ್ಯಾಸಂಗ ಮಾಡುತ್ತಿದ್ದ ಡಾ.ಧರಾವತ್ ಪ್ರೀತಿ ಎಂಬ ವಿದ್ಯಾರ್ಥಿನಿಯ ಮೇಲೆ ರ್ಯಾಗಿಂಗ್ ನಡೆದಿದ್ದು, ವಿದ್ಯಾರ್ಥಿನಿಯು ಆತ್ಮಹತ್ಯೆಗೆ ಯತ್ನಿಸಿ, ಫೆ.26 ರಂದು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ವೈದ್ಯಕೀಯ ಕಾಲೇಜು ವಸತಿನಿಲಯದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ಡಾ.ಪ್ರೀತಿ ಸಾವಿನ ಬಗ್ಗೆ ತಕ್ಷಣವೇ ಕೂಲಂಕುಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು, ಕಾಲೇಜಿನಲ್ಲಿ ರ್ಯಾಗಿಂಗ್ ಮತ್ತು ಪ್ರಾಭಲ್ಯ ಪ್ರವೃತ್ತಿಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಕಾಲೇಜು ಆಡಳಿತ ಮಂಡಳಿ ಮತ್ತು ಸರ್ಕಾರ ಈ ಸಾವಿನ ಹೊಣೆ ಹೊತ್ತು ಈ ತರಹದ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು, ವೈದ್ಯಕೀಯ ಹಾಸ್ಟೆಲ್ ಮತ್ತು ಕಾಲೇಜು ಕ್ಯಾಂಪಸ್‍ಗಳಲ್ಲಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಶೈಕ್ಷಣಿಕ ವಾತಾವರಣವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.