ವೈದ್ಯಕೀಯ ಪರಿಕರ ಕೊರತೆಗೆ ಸೌಮ್ಯಾ ರೆಡ್ಡಿ ಬೇಸರ

ಬೆಂಗಳೂರು, ಏ.೨೯-ಶಾಸಕರ ನಿಧಿಯ ಅನುದಾನವನ್ನು ರಾಜ್ಯ ಸರ್ಕಾರ ಬಳಕೆ ಮಾಡದೆ, ಇರುವುದರಿಂದಲೇ ಇಂದು ವೈದ್ಯಕೀಯ ಪರಿಕರಗಳ ಕೊರತೆ ಉಂಟಾಗಿದೆ ಎಂದು ಶಾಸಕಿ ಸೌಮ್ಯಾ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆ ಮತ್ತು ಈದ್ಗಾ ಮಸೀದಿ ಸೇರಿದಂತೆ ಜಯನಗರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಕೋವಿಡ್ ಸಂಬಂಧಿಸಿದ ತಾತ್ಕಾಲಿಕವಾಗಿ ಸ್ಥಾಪಿಸಿರುವ ಸಿಸಿ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
ಶಾಸಕರ ನಿಧಿಯ ೧ ಕೋಟಿ ಅನುದಾನವನ್ನು ಬಳಸಿ ಆಸ್ಪತ್ರೆಗೆ ಕೋವಿಡ್ ಚಿಕಿತ್ಸೆಗೆ ಬೇಕಾದ ಅಗತ್ಯ ಸಲಕರಣೆಗಳನ್ನು ಖರೀದಿಸಿ ಎಂದು ಕಳೆದ ವರ್ಷವೇ ನಾನು ಸರ್ಕಾರಕ್ಕೆ ಮನವಿ ಮಾಡಿದರು ಕೂಡ ಸರ್ಕಾರ ಆ ಕುರಿತು ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಅಷ್ಟೇ ಅಲ್ಲದೆ, ಇದು ಸಾಧ್ಯವಿಲ್ಲವೆಂದು ನನ್ನ ಮನವಿಯನ್ನು ತಿರಸ್ಕರಿಸಿತು ಎಂದು ಹೇಳಿದರು.
ಸದ್ಯ ಈ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಬೆಡ್ ಗಳ ಕೊರತೆ ಉಂಟಾಗಿದೆ. ನಗರದ ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಕೂಡ ೨ ದಿನ ಜನ ಸರತಿಯಲ್ಲಿ ಕಾಯಬೇಕಾದ ಪರಿಸ್ಥಿತಿಯಿದೆ. ಈ ರೀತಿಯ ಹಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ ಎಂದು ತಿಳಿಸಿದರು.
ಇಂದಿನಿಂದ ೧೮ ವರ್ಷ ಮೇಲ್ಪಟ್ಟವರು ಮೇ ೧ ರಿಂದ ಲಸಿಕೆ ಪಡೆಯಲು ನೋಂದಣಿ ಮಾಡಬಹುದು ಎಂದು ಸರ್ಕಾರ ತಿಳಿಸಿತ್ತು. ಸಂಜೆ ೪ ಗಂಟೆಯಿಂದ ಗಮನಿಸಿದರೆ ನೋಂದಣಿ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಿರುವುದು ಆತಂಕ ಹೆಚ್ಚಿಸಿದೆ ಎಂದರು.
ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಈಗಲಾದರೂ ತ್ವರಿತವಾಗಿ ಬಗೆಹರಿಸದೆ ಹೋದರೆ ರಾಜ್ಯದಲ್ಲಿ ಸ್ಥಿತಿ ಇನ್ನಷ್ಟು ಹದಗೆಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಅವರು, ಸಾರ್ವಜನಿಕರು ಸಹ ಕೋವಿಡ್ ಅನ್ನು ಲಘುವಾಗಿ ಪರಿಗಣಿಸದೆ ಮಾಸ್ಕ್, ಸ್ಯಾನಿಟೈಝೆರ್ ಬಳಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿ ಎಂದು ಸಲಹೆ ಮಾಡಿದರು.