ವೈದ್ಯಕೀಯ ತ್ಯಾಜ್ಯ ಹೆಚ್ಚಳ ಬಿಬಿಎಂಪಿಗೆ ತಲೆನೋವು

ಬೆಂಗಳೂರು, ಏ.೨೩- ಕೋವಿಡ್ ಎರಡನೇ ಅಲೆ ಅಧಿಕವಾಗುತ್ತಿರುವ ಬೆನ್ನಲ್ಲೇ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯು ಹೆಚ್ಚಾಗಿದ್ದು, ಇದರ ವಿಲೇವಾರಿಗೆ ಪಾಲಿಕೆ ಪ್ರತ್ಯೇಕ ಟೆಂಡರ್ ಆಹ್ವಾನಿಸಿದೆ.
ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿ ಪ್ರತಿದಿನ ೪೦ ಟನ್ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಕಳೆದ ೨೦ ದಿನಗಳಿಂದ ಕೊರೊನಾ ತ್ಯಾಜ್ಯ ಹೆಚ್ಚುತ್ತಿದೆ ಎಂದು ಅಂದಾಜಿಸಲಾಗಿದ್ದು, ಈಗ ಪ್ರತಿದಿನ ಹೆಚ್ಚುವರಿಯಾಗಿ ೨೫ ಟನ್ ಕೊರೋನಾ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
ಇನ್ನು, ಶವಾಗಾರದ ಸಮೀಪ ಪಿಪಿಇ ಕಿಟ್, ಮಾಸ್ಕ್ ಹಾಗೂ ವೈದ್ಯಕೀಯ ತ್ಯಾಜ್ಯ ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ರಸ್ತೆ ಬದಿ, ಪಾದಚಾರಿ ಮಾರ್ಗ, ಕಾಲುವೆಗಳಲ್ಲಿ , ಆಸ್ಪತ್ರೆಗಳ ಮುಂಭಾಗಗಳಲ್ಲಿ, ಕಸದ ತೊಟ್ಟಿಗಳಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ.ಇದರಿಂದ ಕೊರೋನಾ ಸೋಂಕು ಹಬ್ಬುವ ಆತಂಕವೂ ಹೆಚ್ಚಾಗಿದೆ. ಹಾಗಾಗಿ, ಸೂಕ್ತ ರೀತಿಯಲ್ಲಿ ನಿರ್ವಹಣೆಗೆ ಪಾಲಿಕೆ ಟೆಂಡರ್ ಕರೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್, ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕೊರೊನಾದಿಂದ ಉತ್ಪತ್ತಿಆಗುವ ತ್ಯಾಜ್ಯವೂ ಹೆಚ್ಚಾಗಿದೆ.
೨೦-೨೫ ಟನ್ ಹೆಚ್ಚಾಗುತ್ತಿದ್ದು, ಸ್ಯಾನಿಟರಿ ತ್ಯಾಜ್ಯದೊಂದಿಗೆ ಬರುತ್ತಿದೆ. ಹೀಗಾಗಿ, ಕೋವಿಡ್ ಆರೈಕೆ ಕೇಂದ್ರ ಹಾಗೂ ವಿವಿಧೆಡೆ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರುವ ಕಂಪನಿಗಳು ಹೊಸ ಟೆಂಡರ್‌ನಲ್ಲಿ ಭಾಗವಹಿಸಲಿವೆ ಎಂದರು.