ವೈದ್ಯಕೀಯ ತುರ್ತುಪರಿಸ್ಥಿತಿ ನಿಭಾಯಿಸುವುದನ್ನು ಎಲ್ಲರೂ ಕಲಿಯಬೇಕು: ಪೊಲೀಸ್ ಕಮೀಶನರ್ ರವಿಕುಮಾರ್

KALABURAGI ( GULBARGA ) , KARNATAKA , SEPTEMBER 10, 2022 : Superintendent of Police Isha Pant, along with City Police Commissioner Y.S. Ravikumar distributing the first-aid kit supplied by the United Hospital to the people at SVP Circle in Kalaburagi on Saturday.

ಕಲಬುರಗಿ; ಸೆ. ೧೦:ಅಫಘಾತಗಳಲ್ಲಿ ತಪ್ಪಿಸಬಹುದಾದ ಸಾವುಗಳು ಹೆಚ್ಚಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್ ಅವರು ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವುದನ್ನು ಎಲ್ಲರೂ ಕಲಿಯಬೇಕೇ ವಿನಃ ಅದು ವೈದ್ಯರ ಕೆಲಸ ಎಂದು ಕೈಚೆಲ್ಲಿ ಕುಳಿತುಕೊಳ್ಳಬಾರದು ಎಂದು ಜನರಿಗೆ ಕಿವಿಮಾತು ಹೇಳಿದರು.

ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆಯು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶನಿವಾರ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸಂಘಟಿಸಿದ್ದ ವಿಶ್ವ ಪ್ರಥಮ ಚಿಕಿತ್ಸಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನರಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕಿರುವ ಪ್ರಾಥಮಿಕ ಜ್ಞಾನದ ಕೊರತೆಯೂ ಅಫಘಾತಗಳಲ್ಲಿ ಸಾವುನೋವುಗಳು ಹೆಚ್ಚಾಗುವುದಕ್ಕೆ ಒಂದು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ನಿಭಾಯಿಸುವುದು ಕೇವಲ ವೈದ್ಯರ ಕೆಲಸವಲ್ಲ. ಅದು ಎಲ್ಲಾ ನಾಗರಿಕರ ಕೆಲಸ ಕೂಡ. ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕೆ ಬೇಕಿರುವ ಪ್ರಾಥಮಿಕ ಜ್ಞಾನ ಜನರಲ್ಲಿ ಇಲ್ಲದಿರುವುದರಿಂದಲೂ ಅಫಘಾತಗಳಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚಾಗುತ್ತಿಗಿವೆ. ಇಂತಹ ಸಂದರ್ಭದಲ್ಲಿ ಮೊದಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಪ್ರಾಥಮಿಕ ಜ್ಞಾನ ಜನರಲ್ಲಿ ವ್ಯಾಪಕವಾಗಿ ಇದ್ದರೆ ಬಹುತೇಕ ಸಾವುಗಳನ್ನು ತಪ್ಪಿಸಬಹುದು, ಎಂದು ಅವರು ಹೇಳಿದರು.

ರಸ್ತೆ ಅಥವ ಇನ್ನಿತ ಅಫಘಾತಗಳ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಆಗುತ್ತಿರುವಾಗ, ಹಾವು ಕಡಿದಾಗ, ನಿರ್ಜಲೀಕರಣ ಉಂಟಾದಾಗ, ಪ್ರಜ್ಞೆ ತಪ್ಪಿದಾಗ, ದೇಹಕ್ಕೆ ಬೆಂಕಿ ಹೊತ್ತಿಕೊಂಡಾಗ ಹಾಗೂ ಇದೇ ರೀತಿಯ ಇನ್ನಿತರ ತುರ್ತುಪರಿಸ್ಥಿತಿಗಳ ಸಂದರ್ಭದಲ್ಲಿ ಜೊತೆಗಿರುವವರು ಯಾವ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಅವರು ಸ್ಥೂಲ ಮಾಹಿತಿಯನ್ನು ನೀಡಿದರಲ್ಲದೇ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಒಂದಿಷ್ಟು ಬಿಡುವು ಮಾಡಿಕೊಂಡು ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ನಿಭಾಯಿಸುವುದರ ಬಗ್ಗೆ ಸ್ವಲ್ಪ ಜ್ಞಾನವನ್ನೂ ನೀಡಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಯಾವ ವೈದ್ಯರೂ ಖಾಲಿ ಇರುವುದಿಲ್ಲ. ಯಾವ ವೈದ್ಯರ ಬಳಿಯೂ ರೋಗಿಗಳ ಹತ್ತಿರ ಬೇರೆ ವಿಚಾರಗಳ ಬಗ್ಗೆ ಮಾತಾಡುವುದಕ್ಕೆ ಸಮಯವಿರುವುದಿಲ್ಲ. ಏಕೆಂದರೆ ಹೊರಗಡೆ ರೋಗಿಗಳು ಅವರನ್ನು ಕಾಣಲು ಸಾಲುಗಟ್ಟಿ ನಿಂತಿರುತ್ತಾರೆ. ಆದರೂ, ವೈದ್ಯರು ಸ್ವಲ್ಪ ಸಮಯ ತೆಗೆದುಕೊಂಡು ತಮ್ಮಲ್ಲಿ ಬರುವ ರೋಗಿಗಳ ಹತ್ತಿರ ಮಾತನಾಡಿ ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವ ಕುರಿತು ಜ್ಞಾನ ನೀಡಬೇಕು. ವೈದ್ಯರಿಂದ ಪಡೆದುಕೊಂಡ ಅಮೂಲ್ಯ ಜ್ಞಾನವನ್ನು ಜನರು ತಮ್ಮ ಮನೆಯವರೊಂದಿಗೆ, ಮಕ್ಕಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು. ಇಡೀ ಸಮಾಜದಲ್ಲಿ ಆ ಜ್ಞಾನ ಪಸರಿಸಿದಾಗ ಮಾತ್ರವೇ ಅಫಘಾತಗಳಲ್ಲಿ ತಪ್ಪಿಸಬಹುದಾದ ಸಾವುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ, ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಫಘಾತವೇ ಜನರನ್ನು ಕೊಲ್ಲುತ್ತಿರುವ ಅತಿದೊಡ್ಡ ಸಮಸ್ಯೆ ಎಂದು ವಿವರಿಸಿದ ರವಿಕುಮಾರ್ ಕ್ಯಾನ್ಸರ್ ತೀರಾ ಕೆಳಗೆ ಎರಡನೇ ಸ್ಥಾನದಲ್ಲಿದೆ ಎಂದರಲ್ಲದೇ ಜನರಲ್ಲಿ ತುರ್ತುಪರಿಸ್ಥಿತಿಯನ್ನು ನಿಭಾಯಿಸುವ ಜ್ಞಾನ ಇದ್ದರೆ ರಸ್ತೆ ಅಫಘಾತಗಳಲ್ಲಿ ಉಂಟಾಗುತ್ತಿರುವ ಸಾವುನೋವುಗಳನ್ನೂ ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ ಎಂದರು.

ಯುನೈಟೆಡ್ ಆಸ್ಪತ್ರೆಯು ತನ್ನ ಉತ್ಕೃಷ್ಟ ದರ್ಜೆಯ ವೈದ್ಯಕೀಯ ಸೇವೆಗಳೊಂದಿಗೆ ಜನೋಪಯೋಗಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರವಿಕುಮಾರ್ ವೈದ್ಯಕೀಯ ಸೇವೆಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ವ್ಯಕ್ತಿಗಳು ಮತ್ತು ಸಂಸ್ಥೆಗಳು ಜನರಲ್ಲಿ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವೈದ್ಯಕೀಯ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರಲ್ಲದೇ ತಮ್ಮ ಪೊಲೀಸ್ ಇಲಾಖೆಯು ಈ ಕೆಲಸಕ್ಕೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಕ್ಕೆ ಸಿದ್ಧವಿದೆ ಎಂದರು.

ಈ ಮನವಿಗೆ ಪ್ರತಿಕ್ರಿಯಿಸಿದ ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ. ವಿಕ್ರಮ್ ಸಿದ್ದಾರೆಡ್ಡಿಯವರು ತಮ್ಮ ಆಸ್ಪತ್ರೆಯು ಶೀಘ್ರದಲ್ಲೇ ಕಲಬುರಗಿಯ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ತುರ್ತುಪರಿಸ್ಥಿತಿ ನಿಭಾಯಿಸುವ ಕೌಶಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ಭರವಸೆ ನೀಡಿದರು.

ನಂತರ ಮಾತಾಡಿದ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಯುನೈಟೆಡ್ ಆಸ್ಪತ್ರೆಯಲ್ಲಿ ನೀಡುತ್ತಿರುವ ಉತ್ಕೃಷ್ಠ ದರ್ಜೆಯ ವೈದ್ಯಕೀಯ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಬುರಗಿಯ ಸುತ್ತ ಎಲ್ಲೇ ರಸ್ತೆ ಅಫಘಾತಗಳು ನಡೆದರೂ ಗಾಯಾಳುಗಳು ಹೋಗಲು ಇಷ್ಟಪಡುವ ಮೊದಲ ಆಸ್ಪತ್ರೆ ಎಂದರೆ ಯುನೈಟೆಡ್ ಆಸ್ಪತ್ರೆ. ಅಲ್ಲಿಗೆ ಹೋದರೆ ಬದುಕುತ್ತೇವೆ ಎಂಬ ಭರವಸೆ ಜನರಲ್ಲಿ ಇದೆ. ಇದು ಯುನೈಟೆಡ್ ಆಸ್ಪತ್ರೆ ಕಾಪಾಡಿಕೊಂಡು ಬಂದಿರುವ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗೆ ಹಿಡಿದ ಕನ್ನಡಿಯಾಗಿದೆ, ಎಂದು ಇಶಾ ಪಂತ್ ಹೇಳಿದರು.

ನಂತರ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮತ್ತು ಕಲಬುರಗಿ ನಗರ ಪೊಲೀಸ್ ಉಪಾಯುಕ್ತರಾದ ಅಡ್ಡೂರು ಶ್ರೀನಿವಾಸುಲು ಅವರು ಯುನೈಡೆಡ್ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಡಾ. ವಿಕ್ರಮ್ ಸಿದ್ದಾರೆಡ್ಡಿಯವರ ಜೊತೆಗೂಡಿ ಜನರಿಗೆ ಪ್ರಥಮ ಚಿಕಿತ್ಸಾ ಕಿಟ್ಟುಗಳನ್ನು ವಿತರಿಸಿದರು. ಪ್ರಥಮ ಚಿಕಿತ್ಸೆಗೆ ಅವಶ್ಯವಿರುವ ಹನ್ನೊಂದು ಔಷಧಿ, ಉಪಕರಣ ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡ ಈ ಕಿಟ್ಟುಗಳನ್ನು ಯುನೈಟೆಡ್ ಆಸ್ಪತ್ರೆಯು ಉಚಿತವಾಗಿ ಸರಬರಾಜು ಮಾಡಿತ್ತು.