ವೈದ್ಯಕೀಯ ಕ್ಷೇತ್ರ ಉನ್ನತೀಕರಣ ಸಿಎಂ ಅಭಿನಂದನೆ

ಬೆಂಗಳೂರು, ಫೆ ೧೬- ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಿಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಣೆ ಮಾಡಿರುವ ಮಹತ್ವದ ನಿರ್ಧಾರವನ್ನು ಸ್ವಾಗತಿಸಿ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಬಹುದಿನಗಳ ಬೇಡಿಕೆಯಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇನ್ನಷ್ಟು ದಕ್ಷತೆ ತರುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ಲೋಕದಲ್ಲಿ ಮಹತ್ವದ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರವು ಸರ್ಕಾರಿ ವಲಯವೆಂದು ವ್ಯಾಪಕ ಬೆಳವಣಿಗೆ ಹೊಂದಿದ್ದು, ಇಲಾಖೆ ಕಾರ್ಯ ನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆ ತರುವ ಕಾರಣಕ್ಕಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗಾಗಿ ರೂ. ೪೦೦ ಕೋಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ರೂ. ೩೫೦ ಕೋಟಿ, ಮೈಸೂರಿನಲ್ಲಿರುವ ೪೦ ಹಾಸಿಗೆ ಸಾಮರ್ಥ್ಯದ ನೆಪ್ರೋ ಯೂರಾಲಜಿ ಆಸ್ಪತ್ರೆ, ೧೦೦ ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲು ಮುಂದಾಗಿರುವುದು ಉತ್ತಮ ನಿರ್ಧಾರ ಎಂದು ಪಾಟೀಲ್ ಹೇಳಿದ್ದಾರೆ.
ಕಲಬುರಗಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು ಇವರ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ.
ಗದಗ, ಕೊಪ್ಪಳ ಹಾಗೂ ಚಾಮರಾಜನಗರದಲ್ಲಿ ೪೫೦ ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ ೧೫೦ ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ನೆಪ್ರೊ ಯೂರಾಲಜಿ ಸಂಸ್ಥೆಯ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ರೋಬೊಟಿಕ್ ಯಂತ್ರದ ಮೂಲಕ ಉತ್ತಮ ಚಿಕಿತ್ಸೆ ನೀಡಲು ಕ್ರಮ ಎಂದರು.
ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ೧೧೪ ಮಾಡೂಲರ್ ಓಟಿಗಳನ್ನು ೧೭೭ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.
ಗದಗ ವೈದ್ಯಕೀಯ ಸಂಸ್ಥೆಯಲ್ಲಿ ಕ್ಯಾಥ್ಲಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಯೂನಿಟ್ ಪ್ರಾರಂಭ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸಂಸ್ಥೆಗಳಲ್ಲಿ ೬೪ ಅನೇಸ್ತೇಷಿಯಾ ವರ್ಕ್ ಸ್ಟೇಷನ್‌ಗಳನ್ನು ೩೪ ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ಅಳವಡಿಕೆ, ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗಳನ್ನು ಇನ್ನು ಮುಂದೆ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆ ಎಂದು ಪಾಟೀಲ್ ಹೇಳಿದ್ದಾರೆ.
ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗ, ಸೋಂಕುಗಳನ್ನು ಪತ್ತೆ ಹಚ್ಚಲು ವೈರಲ್ ರಿಸರ್ಚ್ ಮತ್ತು ಡಯಾಗ್ನಸ್ಟಿಕ್ ಲ್ಯಾಬರೋಟರಿ ನಿರ್ಮಾಣ, ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಗತ್ಯವಿರುವ ಹೊಸ ವೈದ್ಯಕೀಯ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ, ವಸತಿ ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಶತಮಾನೋತ್ಸವದ ನೆನಪಿಗಾಗಿ ಕೆ.ಆರ್ ಆಸ್ಪತ್ರೆಯಲ್ಲಿ ೭೫ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.