ವೈದ್ಯಕೀಯ ಕ್ಷೇತ್ರದಲ್ಲಿ ಸಿಸ್ಟರ್ ಪದ್ಮಾ ಸೇವೆ ಆದರ್ಶನೀಯ

ಅರಸೀಕೆರೆ, ಜು. ೨೯- ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಜನಮಾನಸದಲ್ಲಿ ನೆಲೆಸಿ ಶಾಶ್ವತ ನೆನಪು ಬಿಟ್ಟು ಹೋದ ಪದ್ಮ ಸಿಸ್ಟರ್ ವ್ಯಕ್ತಿತ್ವ ಶ್ಲಾಘನೀಯ ಎಂದು ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಪಿ.ಪಿ. ವೃತ್ತದಲ್ಲಿ ನಾಗರಿಕರ ವೇದಿಕೆ ಮತ್ತು ಪದ್ಮ ಸಿಸ್ಟರ್ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಗಳಿಸುವುದು ಕಷ್ಟಕರ. ಆದರೆ ಪದ್ಮ ಸಿಸ್ಟರ್ ವಿಚಾರದಲ್ಲಿ ಸಾರ್ವಜನಿಕರೇ ಅವರ ಬಂಧು- ಬಳಗ ಆಗುವುದರ ಮೂಲಕ ಮನೆ ಮಗಳಂತೆ ಸ್ವೀಕರಿಸಿ ಭಾವನಾತ್ಮಕವಾಗಿ ಬೆರೆತು ಹೋಗಿದ್ದರು. ನಿವೃತ್ತರಾಗಿದ್ದರೂ ಅವರ ಸೇವಾ ಅವಧಿ ನಂತರವೂ ಸಾರ್ವಜನಿಕ ವಲಯದಲ್ಲಿ ಭಾವನಾತ್ಮಕ ಜೀವನ ನಡೆಸುತ್ತಿದ್ದರು. ಮರಣ ನಂತರವೂ ಅವರ ಸ್ನೇಹಿತರು, ಅಭಿಮಾನಿ ಬಳಗ ಮತ್ತು ಹಿತೈಷಿಗಳು ನಗರದಲ್ಲಿ ಅವರ ಪುಣ್ಯಸ್ಮರಣೆ ಮೂಲಕ ಅನ್ನ ಸಂತರ್ಪಣೆ ಏರ್ಪಡಿಸಿದ್ದು ಇನ್ನಿತರೇ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಿಗೆ ಸ್ಪೂರ್ತಿಯಾಗಿದೆ. ನಿಮ್ಮೆಲ್ಲರ ಈ ಚಟುವಟಿಕೆಗಳು ಸಹೋದರಿ ಪದ್ಮಾ ಅವರ ಆತ್ಮಕ್ಕೆ ಚಿರಶಾಂತಿ ನೀಡುತ್ತದೆ ಎಂದರು.
ನಗರಸಭೆ ಸದಸ್ಯೆ ಶುಭಾ ಮನೋಜ್ ಕುಮಾರ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸಿಸ್ಟರ್ ಪದ್ಮಾ ಇವರು ತಮ್ಮದೇ ಸೇವೆ ನೀಡುತ್ತಾ ಬಂದಿದ್ದರು. ಬಡ ಕುಟುಂಬ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆಗೆ ಇವರು ನೀಡುತ್ತಿದ್ದ ನಿಸ್ವಾರ್ಥ ಸೇವೆ ಮಾದರಿಯಾಗಿದೆ. ರೋಗಿಗಳ ಕಷ್ಟಗಳನ್ನು ಅರಿತು ಆತ್ಮಸ್ಥೈರ್ಯ ತುಂಬುತ್ತಿದ್ದ ಅವರ ಮಾತುಗಳಿಂದಲೇ ಎಷ್ಟೂ ರೋಗಿಗಳು ಮಾನಸಿಕವಾಗಿ ಗುಣ ಹೊಂದಿದ ಸಾಕಷ್ಟು ಉದಾಹರಣೆಗಳಿವೆ. ವ್ಯಕ್ತಿ ಕಾಲಾ ನಂತರ ಮಾತ್ರ ಆತನ ಗುಣಗಾನವನ್ನು ಜನರೇ ಮಾಡುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರೇ ಅವರ ಬಂಧುಗಳಂತೆ ಆಗಮಿಸಿ ಸ್ಮರಿಸುತ್ತಿರುವುದು ಪದ್ಮಾ ಸಿಸ್ಟರ್ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಾಗರಿಕರ ವೇದಿಕೆ ಹಾಗೂ ಅಭಿಮಾನಿಗಳ ಬಳಗ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ನಿಸ್ವಾರ್ಥ ಸೇವೆ ಗುರುತಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸರ್ಕಾರಿ ಜೆ.ಸಿ ಆಸ್ಪತ್ರೆಯ ಡಾ ಶರತ್ ಚಂದ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ ಇತ್ತೀಚೆಗೆ ಸುಮಾರು ಈ ೩ ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ದಿವಂಗತರು ನಿಸ್ವಾರ್ಥ ಸೇವೆ ಸಲ್ಲಿಸುವುದರ ಮೂಲಕ ಆರೋಗ್ಯ ಇಲಾಖೆ ಮತ್ತು ಸಿಬ್ಬಂದಿಗೂ ಉತ್ತಮ ಹೆಸರನ್ನು ತಂದು ಕೊಟ್ಟಿದ್ದರು. ಇವರು ಸಲ್ಲಿಸಿದ ಸೇವೆಗೆ ಇಲಾಖೆ ಅಭಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ನಗರಾಧ್ಯಕ್ಷ ಕಿರಣ್‌ಕುಮಾರ್, ಬಿಜೆಪಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಂಜುಕುಮಾರ್, ಬಾಲಕೃಷ್ಣ, ಎಸ್.ಎಲ್.ವಿ. ಗ್ರೂಪ್‌ನ ಬಾಲಕೃಷ್ಣ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.