ವೈದ್ಯಕೀಯ ಕ್ಷೇತ್ರದಲ್ಲಿ ತ್ವರಿತ ಬದಲಾವಣೆ: ಡಾ.ಗಂಗಾನೆ

ಬಾಗಲಕೋಟೆ,ಏ17: ವೈದ್ಯಕೀಯ ಕ್ಷೇತ್ರದಲ್ಲಿ ತ್ವರಿತ ಬದಲಾವಣೆಗಳಾಗುತ್ತಿವೆ. ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಆಗುತ್ತಿರುವ ಬದಲಾವಣೆಗಳ ಬಗ್ಗೆ ಯುವ ವೈದ್ಯರಿಗೆ ಗಮನವಿರಲಿ' ಎಂದು ನಗರದ ಬಿ.ವಿ.ವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ನಿತಿನ್ ಎಮ್.ಗಂಗಾನೆ ಯುವ ವೈದ್ಯರಿಗೆ ಕರೆ ನೀಡಿದರು. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಬೆಳಗಾವಿಯ ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರೀಸರ್ಚ್ ಸೆಂಟರ್‍ನ ಉಪಕುಲಪತಿಗಳಾದ ಡಾ.ನಿತಿನ್ ಎಮ್.ಗಂಗಾನೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ವೈದ್ಯರನ್ನು ರೂಪಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಎಸ್.ಎನ್.ಮೆಡಿಕಲ್ ಕಾಲೇಜಿನೊಂದಿಗೆ ಬೆಳಗಾವಿಯ ಕೆ.ಎಲ್.ಇ ಯುನಿವರ್ಸಿಟಿ ಸಂಶೋಧನಾ ಕ್ಷೇತ್ರದಲ್ಲಿ ಒಡಂಬಡಿಕೆ ಮಾಡಿಕೊಂಡು ಜೊತೆಯಾಗಿ ಕೆಲಸ ಮಾಡುತ್ತಿದೆ’ ಎಂದು ನುಡಿದ ಡಾ.ನಿತಿನ್ ಎಮ್.ಗಂಗಾನೆ ಯುವವೈದ್ಯರಿಗೆ ಪದವಿ ಪೂರ್ಣಗೊಳಿಸಿದ ನೀವು ವೃತ್ತಿಯಲ್ಲಿ ಬೆಳವಣಿಗೆ ಹೊಂದುವುದು ಈಗ ನಿಮ್ಮ ಕೈಯಲ್ಲಿದೆ' ಎಂದು ಕಿವಿಮಾತು ಹೇಳಿದರು. ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಅಧ್ಯಕ್ಷತೆ ವಹಿಸಿದ್ದರು. ಪದವಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಡೋರ್ಲೆ, ಡಾ.ಸುರೇಖಾರಾಣಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕುಮಾರಿ ಶ್ರಾವಣಿ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಅವರು ಅತಿಥಿಗಳನ್ನು ಸ್ವಾಗತಿಸಿ ಕಾಲೇಜಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಪದವಿ ಪ್ರದಾನ ಸಮಾರಂಭದಲ್ಲಿ ಮೆಡಿಕಲ್ ಕಾಲೇಜಿನ 164 ಎಮ್.ಬಿ.ಬಿ.ಎಸ್ ಮತ್ತು 26 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬಿ.ವಿ.ವಿ.ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿಯುವ ವೈದ್ಯರು ವೃತ್ತಿ ಸಂಹಿತೆಯನ್ನು ಮರೆಯದಿರಿ. ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ನಿರಂತರ ಪ್ರಯತ್ನ ಮತ್ತು ಮಾರ್ಗದರ್ಶನದಿಂದ ಎಸ್.ಎನ್.ಮೆಡಿಕಲ್ ಕಾಲೇಜ್ ವೈದ್ಯಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿದೆ’ ಎಂದು ಹೇಳಿದರು.
ಯುವ ವೈದ್ಯರಾದ ಅಖಿಲ, ವರ್ಷಾ, ಸಬಾಫರ್ಹಿನ್, ಅಕ್ಷತಾ, ಪೃಥ್ವಿ, ಮೇಘನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಡಾ.ಅಭಿಜೀತ್ ಚಿನ್ನದ ಪದಕಗಳನ್ನು ಪಡೆದುಕೊಂಡರು. ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ಡಾ.ನಿತಿನ್ ಎಮ್.ಗಂಗಾನೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ದಾನಿಗಳು ಸ್ಥಾಪಿಸಿದ ಪ್ರಶಸ್ತಿಗಳನ್ನು ಆಯಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡಿ ಸನ್ಮಾನಿಸಲಾಯಿತು. ಡಾ.ಸಂಜೀವ ಕೊಳಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಸೊಲಬನವರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಮತ್ತು ಡಾ.ಡೋರ್ಲೆ ವಂದಿಸಿದರು. ಡಾ.ಅಂಕದ, ಡಾ.ಮುತಾಲಿಕ್, ಡಾ.ಸುನೀತಾ ಮತ್ತು ಡಾ.ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭದಲ್ಲಿ ಬಿ.ವಿ.ವಿ.ಸಂಘದ ಗೌರವಾನ್ವಿತ ಸದಸ್ಯರು, ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು, ಮಾಧ್ಯಮ ಮಿತ್ರರು, ಮಹಾವಿದ್ಯಾಲಯ ವೈದ್ಯರು, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.