ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಪ್ರತಿನಿತ್ಯ ಗಮನ ಹರಿಸಿ

ವಿಜಯಪುರ:ಎ.8: ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳತ್ತ ಗಮನ ಹರಿಸದೇ ರೋಗಿಗಳೊಂದಿಗೆ ಹೆಚ್ಚಿನ ಸಮಯ ಕಳೆದರೆ ಅದರ ಅನುಭವದ ಮೇಲೆ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯ ಎಂದು ಬೆಳಗಾವಿಯ ಕಾಹೆರ್ ನ ಜೆ ಎನ್. ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಎನ್. ಎಸ್. ಮಹಾಂತಶೆಟ್ಟಿ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಚಿಕ್ಕ ಮಕ್ಕಳ ವಿಭಾಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡು ದಿನಗಳ ಬಿ-ಐಟಿಇಸ್- 2023 ಎ ಪಿಡಿಯಾಟ್ರಿಕ್ ಪ್ರ್ಯಾಕ್ಟಿಕಲ್ ಕ್ರ್ಯಾಶ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಪ್ರತಿನಿತ್ಯ ಗಮನ ಹರಿಸಬೇಕು. ಕೇವಲ ಪರೀಕ್ಷೆಗಳ ಬಗ್ಗೆ ಗಮನ ಹರಿಸದೇ ರೋಗಿಗಳ ಜೊತೆ ಸಂವಹನ, ರೋಗಗಳ ಸಂಶೋಧನೆ, ಕಾಯಿಲೆಗಳನ್ನು ದೃಢೀಕರಿಸುವುದರ ಕಡೆಗೂ ಗಮನ ಹರಿಸಬೇಕು. ರೋಗಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಸಿಗುವ ಅನುಭವ ಉತ್ತಮ ವೈದ್ಯರಾಗಲು ನೆರವಾಗುತ್ತದೆ. ಲಭ್ಯ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವುದು, ನಿರ್ದಿಷ್ಠ ಪ್ರಕರಣಗಳ ಕೂಲಂಕಷ ಅಧ್ಯಯನ ಮುಖ್ಯವಾಗಿದೆ. ರೋಗಗಳಿಗೆ ಮೂಲಭೂತ ಕಾರಣಗಳ ಬಗ್ಗೆ ತಿಳಿ???ಂಡರೆ ಶೇ. 50 ರಷ್ಟು ಕೆಲಸ ಮೂಗಿಸಿದಂತೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ನಿದ್ದೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಬಹಳ ಜನರಿಗೆ ಮಾಹಿತಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮಗಳಿಂದ ಯುವ ವೈದ್ಯರಿಗೆ ಇಂಥ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ವಿವಿಯ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ದೇಶದ ಭವಿಷ್ಯದ ಶೇ. 40ರಷ್ಟು ನಾಗರಿಕರ ಭವಿಷ್ಯ ಚಿಕ್ಕಮಕ್ಕಳ ತಜ್ಞರ ಕೈಯ್ಯಲ್ಲಿದೆ. ಶೈಕ್ಷಣಿಕ ಅಡಿಪಾಯ ಗಟ್ಟಿಯಾಗಿದ್ದರೆ ಆಯಾ ಸಂಸ್ಥೆಗಳು ಸದೃಢವಾಗಿ ಮುನ್ನಡೆಯಲು ಸಾಧ್ಯ. ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಪ್ರಯೋಗಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿದರೆ ವೃತ್ತಿ ಕೌಶಲ್ಯ ಹೆಚ್ಚಿಸಬಹುದಾಗಿದೆ. ಸಾಮಾಜಿಕ ಜಾಲತಾಣಗಳಿಂದ ರೋಗಗಳ ಪತ್ತೆಯ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ, ಪ್ರಯೋಗಗಳ ಫಲಿತಾಂಶಗಳಿಂದ ಉತ್ತಮ ಚಿಕಿತ್ಸೆ ನೀಡಲು ನೆರವಾಗುತ್ತದೆ. ಶ್ರಮಪಟ್ಟು ಅಧ್ಯಯನ ಮಾಡಿದರೆ ಫಲಿತಾಂಶ ಫಲಪ್ರದವಾಗಿರುತ್ತದೆ. 36 ವರ್ಷಗಳ ಇತಿಹಾಸ ಹೊಂದಿರುವ ಬಿ.ಎಲ್.ಡಿ.ಇ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಇಂದು ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ವೈದ್ಯಕೀಯ ಶಿಕ್ಷಣ ನೀಡುತ್ತಿದೆ. ನಮ್ಮಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿವೆ, ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಕಲ ಸೌಲಭ್ಯಗಳಿವೆ ಎಂದು ಹೇಳಿದರು.
ವಿವಿಯ ಡೀನ್ ಡಾ. ಎಸ್. ವಿ. ಪಾಟೀಲ ಮಾತನಾಡಿ, ಚಿಕ್ಕಮಕ್ಕಳ ವಿಭಾಗದಿಂದ ಈವರೆಗೆ 127 ವೈದ್ಯಕೀಯ ಲೇಖನಗಳು ಪ್ರಕಟವಾಗಿದ್ದು, ಅವುಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 97 ಲೇಖನಗಳು ನಾನಾ ನಿಯತಕಾಲಿಕೆಗಳಲ್ಲಿ ಪ್ರಟಕವಾಗಿರುವುದು ಗಮನಾರ್ಹವಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ 70ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಚೆನ್ನೈನ ಶ್ರೀ ರಾಮಚಂದ್ರ ಹೈಯರ್ ಎಜುಕೇಶನ್ ???ಂಡ್ ರಿಸರ್ಚ್(ಶ್ರೀಹೆರ್) ಮೆಡಿಕಲ್ ಕಾಲೇಜು ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚೆನ್ನೈನ ಡಾ. ರಾಮಚಂದ್ರ, ಡಾ. ಪದ್ಮಸಾನಿ, ಡಾ. ರಾಜಕುಮಾರ ಪಿ, ಡಾ. ಅರುಂಧತಿ ಪಾಟೀಲ, ಬಿ.ಎಲ್.ಡಿ.ಇ ಡೀಮ್ಮಡ್ ವಿವಿಯ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರಾಜೇಶ ಹೊನ್ನುಟಗಿ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಚಿಕ್ಕಮಕ್ಕಳ ತಜ್ಞರಾದ ಡಾ. ಎಂ. ಎಂ. ಪಾಟೀಲ, ಸಮಉಪಕುಲಪತಿ ಡಾ. ಅರುಣ ಚಂ. ಇನಾಮದಾರ ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕಮಕ್ಕಳ ತಜ್ಞರ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ಕಲ್ಯಾಣಶೆಟ್ಟರ ಸ್ವಾಗತಿಸಿದರು. ಡಾ. ಸಿದ್ದು ಚರ್ಕಿ ಮತ್ತು ಡಾ. ವಿಜಯಲಕ್ಷ್ಮಿ ಬೂದಿಹಾಳ ನಿರೂಪಿಸಿದರು. ಡಾ. ತಿರುಮಲ ಕುರಕರ್ಣಿ ವಂದಿಸಿದರು.