ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಕೆ

ಕೋಲಾರ,ಜ.೫: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ೭೫೦ ರೂ. ಕೋಟಿಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ೨೦೨೧-೨೨ ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮುಳಬಾಗಿಲು ನಗರಕ್ಕೆ ಒಳಚರಂಡಿ ಯೋಜನೆಗೆ ಪ್ರಸ್ತಾವನೆ ಹಾಗೂ ಸೋಮೇಶ್ವರ ದೇವಸ್ಥಾನ, ಅಂತರಗಂಗೆ, ಆವಣಿ, ಕುರುಡುಮಲೆ, ಕೋಟಿಲಿಂಗ, ಚಿಕ್ಕತಿರುಪತಿ ಮುಂತಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ ಅವರು ಜಿಲ್ಲೆಯು ಅಂತರ ರಾಜ್ಯ ಗಡಿಯಲ್ಲಿರುವುದರಿಂದ ಕೋಲಾರದಲ್ಲಿ ಹೈಟೆಕ್ ಬಸ್‌ನಿಲ್ದಾಣ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಸುಸಜ್ಜಿತ ಹೋಟೆಲ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ, ಕೋಲಾರಕ್ಕೆ ಹೊಸ ಐ.ಬಿ. ಪರಿವೀಕ್ಷಣಾ ಮಂದಿರ ಅಗ್ಯವಿದ್ದು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರದ ಕೆ.ವೈ.ನಂಜೇಗೌಡ ಅವರು ಮಾತನಾಡಿ, ೨೨ ಎಕರೆ ಜಾಗದಲ್ಲಿ ೧೨೦೦ ಬಡವರಿಗೆ ಉಚಿತ ನಿವೇಶನ ನೀಡಲು ಲೇಔಟ್ ಅಭಿವೃದ್ಧಿ ಪಡಿಸಲು ೨೦ ಕೋಟಿ ರೂ. ಹಾಗೂ ಮಾಲೂರು ಕೆರೆಗೆ ೨೩.೮೫ ರೂ. ಪ್ರಸ್ತಾವನೆ ನೀಡಿದರು. ಮಾಲೂರಿನ ಸಮಗ್ರ ಅಭಿವೃದ್ಧಿಗಾಗಿ ೩೦ ಕೋಟಿಗಳ ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆ ಸಲ್ಲಿಸಿದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನೆನಪಿನ ಅಧ್ಯಯನ ಕೇಂದ್ರವನ್ನು ಮಾಲೂರಿನಲ್ಲಿರುವ ಅವರ ಸ್ವಂತ ಗ್ರಾಮ ಮಾಸ್ತಿಯಲ್ಲಿ ಸ್ಥಾಪಿಸಲು ಸಲಹೆ ನೀಡಿದರು.
ಸಭೆಯಲ್ಲಿ ಕೆ.ಜಿ.ಎಫ್. ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.