ವೈದ್ಯಕೀಯ ಕಾಲೇಜಿನೊಂದಿಗೆ ವಿವಿ ಸ್ಥಾಪನೆ; ಮುರುಘಾ ಶ್ರೀ ಸಂತಸ

ಚಿತ್ರದುರ್ಗ ಮೇ. 4 – ಬರದ ಭೂಮಿಯಾದ ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜಿನೊಂದಿಗೆ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು ಒಂದು ಮಹತ್ವಾಕಾಂಕ್ಷೆ ಹೊಂದಿದ್ದರು. ಅದೆಂದರೆ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠದ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕೆಂಬುದು. ಅವರ ಇಚ್ಛೆಯನ್ನು ನೆರವೇರಿಸಲೆಂಬಂತೆ 20ವರ್ಷಗಳ ಹಿಂದೆ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಲಾಯಿತು. ಬಸವೇಶ್ವರ ಆಸ್ಪತ್ರೆ ಸಾರ್ವಜನಿಕರ ಸೇವೆ ನೀಡುತ್ತಿದ್ದು ಕೊರೋನಾ ಸಂಕಷ್ಟದಲ್ಲಿರುವ ಜಿಲ್ಲೆಯ ಜನತೆಗೆ ಸೂಕ್ತವಾಗಿ ಸ್ಪಂದಿಸುತ್ತಿದೆ. ಕಳೆದ ವರ್ಷ ಪ್ರಥಮ ಅಲೆ ಬಂದಾಗ 80ರೋಗಿಗಳಿಗೆ ಈಗ 120 ರೋಗಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಹೆಚ್ಚಿನ ಅಗತ್ಯತೆ ಕಂಡುಬಂದಲ್ಲಿ ಹೋಟೆಲ್ ಅಥವಾ ಕಲ್ಯಾಣಮಂಟಪವನ್ನು ಬಾಡಿಗೆ ಪಡೆದು ಈ ಭಾಗದ ಜನರಿಗೆ ಸ್ಪಂದಿಸಲಾಗುತ್ತದೆಂದು ಇಂದು ನಡೆದಂತಹ  ಕೌನ್ಸಿಲ್ ಸಮಿತಿ ಸಭೆಯಲ್ಲಿ ಜಮುರಾ ವಿದ್ಯಾಪೀಠದ ಅಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಸಭೆಗೆ ಮಾಹಿತಿ ನೀಡಿದರು.ಶ್ರೀಮಠದ ಮಹತ್ವಾಕಾಂಕ್ಷೆಯೆಂದರೆ ನೂರಾರು ಸಂಸ್ಥೆಗಳನ್ನು ನಡೆಸುತ್ತಿರುವ ವಿದ್ಯಾಪೀಠವು ಒಂದು ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸಬೇಕೆಂಬುದು. ಅದನ್ನು ಅಧಿಕಾರದಲ್ಲಿರುವ ಸರ್ಕಾರದಿಂದ ಮೇಲ್ಮನೆ ಮತ್ತು ಕೆಳಮನೆ ಎರಡೂ ಸದನಗಳಲ್ಲಿ ಮಂಡನೆಯಾಗಿ ಮುಂದೆ ಅದು ಗೌರವಾನ್ವಿತ ರಾಜ್ಯಪಾಲರ ಅನುಮೋದನೆಯೊಂದಿಗೆ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಣೆಯಾಗಿರುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ರಾಜ್ಯಪಾಲರನ್ನು ಅಭಿನಂದಿಸಲಾಯಿತು. ಸಭೆಯ ನಡಾವಳಿಯಲ್ಲಿ ಕುಲಾಧಿಪತಿಯ ಆಯ್ಕೆ ಪ್ರಕ್ರಿಯೆಯು ಸೇರಿದ್ದು ಸರ್ವ ಸದಸ್ಯರು ಸೇರಿಕೊಂಡು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅವರ ಹೆಸರನ್ನು ಜಮುರಾ ವಿಶ್ವವಿದ್ಯಾಲಯದ ಕುಲಾಧಿಪತಿಯ ಸ್ಥಾನಕ್ಕೆ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಷಣ್ಮುಖಪ್ಪನವರು ಸೂಚಿಸಿದರು. ಇಡೀ ಸಭೆ ಅದನ್ನು ಅನುಮೋದಿಸಿತು. ಕುಲಪತಿ, ಕುಲಸಚಿವ ಇತ್ಯಾದಿ ಅಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಕುಲಾಧಿಪತಿಗಳಿಗೆ ನೀಡಲಾಯಿತು.ಆಡಳಿತ ಮಂಡಳಿ ಸದಸ್ಯರಾದ ಕೆ.ವಿ.ಪ್ರಭಾಕರ್ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಸಭೆಯಲ್ಲಿ ಎನ್.ಲಿಂಗಮೂರ್ತಿ, ಪಟೇಲ್ ಶಿವಕುಮಾರ್, ಹರ್ತಿಕೋಟೆ ವೀರೇಂದ್ರಸಿಂಹ, ಬಸವರಾಜ ಪಾಟೀಲ ಮೊದಲಾದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು