ವೈಟ್ಫೀಲ್ಡ್ ಆರ್ಟ್ ಕಲೆಕ್ಟಿವ್: ಏಳನೇ ಆವೃತ್ತಿ ವಿ.ಆರ್.ಬೆಂಗಳೂರು ಉದ್ಘಾಟನೆ

ಬೆಂಗಳೂರು, ಏ.೬-ಯುಜ್ ಆರ್ಟ್ಸ್ ಫೌಂಡೇಷನ್ ವತಿಯಿಂದ ಸಾರ್ವಜನಿಕ ಕಲಾ ಉತ್ಸವ ವೈಟ್ಫೀಲ್ಡ್ ಆರ್ಟ್ ಕಲೆಕ್ಟಿವ್ ನ ಏಳನೇ ಆವೃತ್ತಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು. ಈ ಕಲಾ ಉತ್ಸವದ ?ಗಡಿಗಳನ್ನು ಮೀರಿದ ಪರಿಕಲ್ಪನೆಯು, ಕಲಾವಿದರ ದೃಷ್ಟಿ, ಕಲ್ಪನೆ ಮತ್ತು ಕಲಾತ್ಮಕ ಪ್ರತಿಭೆಯನ್ನು ಪ್ರತಿಬಿಂಬಿಸುವ ನವೀನ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ರಚಿಸಲು ಪ್ರೇರೇಪಿಸುತ್ತದೆ. ಒಂದು ತಿಂಗಳ ಕಾಲ ನಡೆಯುವ ಈ ಉತ್ಸವವನ್ನು ಖ್ಯಾತ ಕೊಳಲು ವಾದಕ ಮತ್ತು ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರು ಉದ್ಘಾಟಿಸಿದರು. ‘ಕಲಾ ಕಾರ’ ಅನಾವರಣ ಹಾಗೂ ಸಾಂಪ್ರದಾಯಿಕ ದೀಪ ಬೆಳಗಿಸುವ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭವಾಯಿತು. ಅದರ ನಂತರ ವಿವೃತ್ತಿ ಡ್ಯಾನ್ಸ್ ಕಂಪನಿಯ ಕಲಾವಿದರ ’ಸಂಗಮಂ’ ಶೀರ್ಷಿಕೆಯ ಸಮ್ಮೋಹನಗೊಳಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ ಮತ್ತು ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನವು ಕೇಳುಗರನ್ನು ಹೊಸ ಭಾವಲೋಕಕ್ಕೆ ಕರೆದುಕೊಂಡು ಹೋಯಿತು.
ಉತ್ಸವದಲ್ಲಿ ೧೦೦ಕ್ಕೂ ಹೆಚ್ಚು ಕಲಾ ಸ್ಥಾಪನೆಗಳು, ಶಿಲ್ಪಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಕಲಾ ಸ್ಥಾಪನೆಗಳನ್ನು (ಆರ್ಟ್ ಇನ್ಸ್ಟಾಲೇಷನ್ಸ್) ಕರ್ನಾಟಕ ಚಿತ್ರಕಲಾ ಪರಿಷತ್ತು, ಬೆಂಗಳೂರು ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಮತ್ತು ಇತರ ಹಿರಿಯ ಕಲಾವಿದರು ಸಿದ್ಧಪಡಿಸಿದ್ದಾರೆ. ಯುನೆಸ್ಕೊ ಮತ್ತು ಐಕಾನಿಕ್ ವುಮೆನ್ ಪ್ರಾಜೆಕ್ಟ್ ನ ಸಂಸ್ಥೆಗಳ ಜೊತೆಗೆ ಸಾರಾ ಅರಕ್ಕಲ್ ಗ್ಯಾಲರಿ ಮತ್ತು ರೆಡ್ ಲೈನ್ ಗ್ಯಾಲರಿ- ವೈಟ್ಫೀಲ್ಡ್ ಆರ್ಟ್ ಕಲೆಕ್ಟಿವ್ ಜೊತೆಗೆ ಕೈಜೋಡಿಸಿವೆ. ಕಲಾ ಕಾರ್ ಅನ್ನು ಬಹುಬಗೆಯ ಕಲಾವಿದ ಪ್ರದೀಪ್ ಕುಮಾರ್ ಅವರ ಸಹಯೋಗದೊಂದಿಗೆ ರಚಿಸಲಾಗಿದೆ. ಪ್ರದೀಪ್ ಕುಮಾರ್ ಅವರ ಸ್ಥಳೀಯ ಸಂಸ್ಕೃತಿಯಾದ ಲಂಬಾಣಿ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಕಥನ ರೂಪಗಳು ಮತ್ತು ಅಲಂಕಾರಿಕ ಸಂಗತಿಗಳಿಂದ ಕಲಾ ಕಾರ್ ಪ್ರೇರಿತವಾಗಿದೆ. ವಿಆರ್ ಬೆಂಗಳೂರುನಲ್ಲಿ ಪಾರ್ಕಿಂಗ್ ಪ್ರದೇಶದ ಗೋಡೆಗಳನ್ನು ಕಲಾ ಗ್ಯಾಲರಿಯಾಗಿ ಪರಿವರ್ತಿಸಲಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕಲಾಕೃತಿಗಳನ್ನು ಬೇಸ್ಮೆಂಟ್ ಆರ್ಟ್ ಪ್ರಾಜೆಕ್ಟ್ ಪ್ರದರ್ಶಿಸಿದೆ. ಮುಂದಿನ ತಿಂಗಳು ವಿಆರ್ ಬೆಂಗಳೂರು- ಕಲಾ ಸ್ಥಾಪನೆಗಳು, ಛಾಯಾಗ್ರಹಣ, ಪ್ರದರ್ಶನಗಳು, ಕಾರ್ಯಾಗಾರಗಳು, ಆರ್ಟ್ ಸಿನಿಮಾ ಸ್ಕ್ರೀನಿಂಗ್ ಮತ್ತು ಆರ್ಟ್ ಬಜಾರ್ಗಳೊಂದಿಗೆ ಕಲಾತ್ಮಕ ಆಚರಣೆಯ ಕೇಂದ್ರವಾಗಿ ಬದಲಾಗಲಿದೆ.
ವೈಟ್ಫೀಲ್ಡ್ ಆರ್ಟ್ ಕಲೆಕ್ಟಿವ್ನ ಕ್ಯುರೇಟರ್ ಸುಮಿ ಗುಪ್ತಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಈ ಅದ್ಭುತವಾದ ಉತ್ಸವವನ್ನು ಅನಾವರಣಗೊಳಿಸುವುದು ನನಗೆ ಅಪಾರ ಸಂತೋಷವನ್ನು ತಂದಿದೆ. ಈ ಉತ್ಸವವು ದೊಡ್ಡ ಪ್ರಮಾಣದ ಸ್ಥಾಪನೆಗಳು, ಶಿಲ್ಪಗಳು, ಮಿಶ್ರ ಮಾಧ್ಯಮ ಕೃತಿಗಳು, ಛಾಯಾಗ್ರಹಣ, ಸಂಗೀತ ಮತ್ತು ನೃತ್ಯವನ್ನು ಪ್ರದರ್ಶಿಸುವ ಕಲಾವಿದರಿಗೆ ಸ್ಪೂರ್ತಿದಾಯಕ ವೇದಿಕೆಯನ್ನು ಸೃಷ್ಟಿಸುತ್ತದೆ. ವೈಟ್ಫೀಲ್ಡ್ ಆರ್ಟ್ ಕಲೆಕ್ಟಿವ್ ೨೦೨೪- ನಗರದ ಕಲೆ ಮತ್ತು ಸಂಸ್ಕೃತಿಯ ಸಂಭ್ರಮಾಚರಣೆಯಲ್ಲಿ ಕಲಾ ಅಭಿಜ್ಞರು, ಕಲಾ ವಿದ್ಯಾರ್ಥಿಗಳು ಮತ್ತು ಪೋಷಕರ ಸಮುದಾಯವನ್ನು ಮತ್ತು ಬೆಂಗಳೂರಿನ ಜನರನ್ನು ಒಟ್ಟುಗೂಡಿಸಲಿದೆ. ಇಂತಹ ಉತ್ಸವಗಳ ಮೂಲಕ ನಾವು ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನಷ್ಟೇ ಒದಗಿಸುತ್ತಿಲ್ಲ. ಇದರ ಜೊತೆಗೆ, ನಗರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸೇರಿರುವ ಮತ್ತು ಗೌರವದ ಭಾವನೆಯನ್ನೂ ಪೋಷಿಸುತ್ತದೆ ಎಂದು ಹೇಳಿದ್ದಾರೆ.