ವೈಟಿಪಿಎಸ್ ಸೇರಿ ಮೂರು ವಿದ್ಯುತ್ ಸ್ಥಾವರ : ಆಕ್ಸಿಜನ್ ಉತ್ಪಾದನೆಗೆ ಸೂಚನೆ

ಬೇಸಿಗೆಯ ವಿದ್ಯುತ್ ಉತ್ಪಾದನೆ ಒತ್ತಡದ ಮಧ್ಯೆ ಜೀವ ರಕ್ಷಕ ಆಕ್ಸಿಜನ್ ಸಂಗ್ರಹಕ್ಕೂ ಸೈ
ರಾಯಚೂರು.ಏ.೨೫- ರಾಜ್ಯಕ್ಕೆ ವಿದ್ಯುತ್ ಪೂರೈಸುವ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಈಗ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಸುವ ಜವಾಬ್ದಾರಿ ವಹಿಸಲಾಗಿದೆ.
ಯರಮರಸ್ ಶಾಖೋತ್ಪನ್ನ ಕೇಂದ್ರ, ಬಳ್ಳಾರಿಯ ಶಾಖೋತ್ಪನ್ನ ಕೇಂದ್ರ ಹಾಗೂ ಬೆಂಗಳೂರಿನ ಯಲಹಂಕ ಶಾಖೋತ್ಪನ್ನ ಕೇಂದ್ರಗಳಲ್ಲಿ ಆಕ್ಸಿಜನ್ ಉತ್ಪಾದನೆಗೆ ಸೂಚಿಸಲಾಗಿದೆ. ಕಳೆದ ಎರಡು, ಮೂರು ದಿನಗಳಿಂದ ಆಕ್ಸಿಜನ್ ಸಂಗ್ರಹ ಕಾರ್ಯ ನಡೆದಿದ್ದು, ಮೂರು ಶಾಖೋತ್ಪನ್ನ ಕೇಂದ್ರಗಳಿಂದ ಸಾಧ್ಯವಾದಷ್ಟು ಆಕ್ಸಿಜನ್ ಸಂಗ್ರಹ ಕಾರ್ಯ ನಡೆದಿದೆ. ಶಾಖೋತ್ಪನ್ನ ಕೇಂದ್ರಗಳಲ್ಲಿ ಓಝೋನ್ ಜನರೇಷನ್ ಉತ್ಪಾದನೆ ತಂತ್ರಜ್ಞಾನ ಹೊಂದಲಾಗಿದೆ. ಔ೩ ಆಕ್ಸಿಜನ್ ಉತ್ಪಾದನೆ ಹೊಂದಿದ ಈ ಕೇಂದ್ರಗಳಲ್ಲಿ ಔ೩ ಹಂತದ ಒಂದು ಹೆಜ್ಜೆ ಪೂರ್ವ ಆಕ್ಸಿಜನ್ (ಔ೨) ಸಂಗ್ರಹಿಸುವ ಅವಕಾಶವಿದೆ.
ಓಝೋನ್ ಉತ್ಪಾದನೆ ಹಂತಕ್ಕೆ ಹೋಗುವ ಪೂರ್ವ ಜೀವ ರಕ್ಷಕ ಆಕ್ಸಿಜನ್ ಲಭ್ಯವಿರುತ್ತದೆ. ಇದನ್ನು ಅಲ್ಲಿಯೇ ಸಂಗ್ರಹಿಸುವ ಮೂಲಕ ರಾಜ್ಯದ ಕೊರೊನಾ ರೋಗಿಗಳಿಗೆ ಪೂರೈಸಲು ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆಯ ಒತ್ತಡದ ಜೊತೆಗೆ ಜನರ ಜೀವ ರಕ್ಷಣೆಗೂ ವಿದ್ಯುತ್ ಸ್ಥಾವರಗಳು ನೆರವಾಗುತ್ತಿವೆ. ರಾಯಚೂರು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ೭ ಕ್ಯೂಬಿಕ್ ಮೀಟರ್ ವ್ಯಾಸದ ಸಿಲಿಂಡರನಲ್ಲಿ ಸರಿಸುಮಾರು ೭ ಸಾವಿರ ಲೀಟರ್ ಆಕ್ಸಿಜನ್ ಸಂಗ್ರಹ ಸಾಧ್ಯವೆಂದು ಅಂದಾಜು ಮಾಡಲಾಗಿದೆ.
ಆದರೆ, ಯರಮರಸ್ ವಿದ್ಯುತ್ ಸ್ಥಾವರದಿಂದ ಆಕ್ಸಿಜನ್ ಸಂಗ್ರಹಿಸಲು ಬೇಕಾದಂತಹ ವ್ಯವಸ್ಥೆಗೆ ಆದೇಶಿಸಲಾಗಿದೆ. ದುರಂತವೆಂದರೇ, ಶೇ.೯೩ ರಷ್ಟು ಶುದ್ಧ ಆಕ್ಸಿಜನ್ ಲಭ್ಯವಿದ್ದರೂ, ಇದನ್ನು ಸಂಗ್ರಹಿಸುವ ವ್ಯವಸ್ಥೆಯ ಕೊರತೆಯಿಂದಾಗಿ ವೈಟಿಪಿಎಸ್‌ನಲ್ಲಿ ಇನ್ನೂ ಆಕ್ಸಿಜನ್ ಸಂಗ್ರಹ ಸಾಧ್ಯವಾಗುತ್ತಿಲ್ಲ. ಕೆಪಿಸಿಯಿಂದ ಈಗಾಗಲೇ ಆಕ್ಸಿಜನ್ ಸಂಗ್ರಹಕ್ಕಾಗಿ ಬೇಕಾದಂತಹ ಕಾಮಗಾರಿಗಾಗಿ ಸೂಚಿಸಲಾಗಿದೆ. ಕಳೆದ ೫ ದಿನಗಳಿಂದ ಸಂಬಂಧಪಟ್ಟ ಏಜೆನ್ಸಿ ಈ ಕಾಮಗಾರಿ ನಿರ್ವಹಣೆಗೆ ಆಗಮಿಸಬಹುದೆಂಬ ನಿರೀಕ್ಷೆಯಿದೆಯಾದರೂ, ಕೊರೊನಾ ತೀವ್ರತೆ ಹಿನ್ನೆಲೆಯಲ್ಲಿ ಕಾಮಗಾರಿ ನಿಗದಿತ ವೇಳೆಯಲ್ಲಿ ನಡೆಯುತ್ತಿಲ್ಲ.
ಈಗಾಗಲೇ ಯಲಹಂಕದಲ್ಲಿ ಆಕ್ಸಿಜನ್ ಸಂಗ್ರಹ ಕಾರ್ಯ ಆರಂಭಗೊಂಡಿದೆಂದು ಹೇಳಲಾಗಿದೆ. ಈ ಕುರಿತು ವೈಟಿಪಿಎಸ್‌ನ ಮುಖ್ಯಸ್ಥರನ್ನು ಸಂಪರ್ಕಿಸಿದಾಗ ವೈಟಿಪಿಎಸ್‌ನನಲ್ಲಿ ಶೇ.೯೩ ರಷ್ಟು ಶುದ್ಧ ಆಕ್ಸಿಜನ್ ಲಭ್ಯವಿದೆ. ಆದರೆ, ಇದನ್ನು ಸಂಗ್ರಹಿಸಲು ಅಗತ್ಯವಾದ ವ್ಯವಸ್ಥೆಯ ಕೊರತೆ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಆರಂಭಗೊಂಡಿದೆ. ವೈಟಿಪಿಎಸ್‌ನಲ್ಲಿ ಆಕ್ಸಿಜನ್ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಕೈಗೊಳ್ಳಬೇಕಾಗಿತ್ತು. ಬೆಂಗಳೂರು ಕೇಂದ್ರ ಕಛೇರಿಯಿಂದ ಇದಕ್ಕಾಗಿ ಏಜೆನ್ಸಿಯನ್ನು ನಿಯುಕ್ತಿಗೊಳಿಸಿದ್ದಾರೆ. ಈ ತಂಡ ಆಗಮಿಸಿ, ಆಕ್ಸಿಜನ್ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರೇ, ಇಲ್ಲಿಂದಲೂ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಸಬಹುದಾಗಿದೆಂದರು.
ಬೇಸಿಗೆ ಹಿನ್ನೆಲೆಯಲ್ಲಿ ವೈಟಿಪಿಎಸ್‌ನ ೧ ನೇ ಘಟಕ ೪೪೫ ಮೆ.ವ್ಯಾ. ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಈಗ ಆಕ್ಸಿಜನ್ ಸಹ ರಾಜ್ಯಕ್ಕೆ ಪೂರೈಸಬೇಕಾದಂತಹ ಮಹತ್ವದ ಹೊಣೆಯನ್ನು ವಿದ್ಯುತ್ ಸ್ಥಾವರದಲ್ಲಿ ನಿರ್ವಹಿಸಲಾಗುತ್ತಿದೆ. ಒಟ್ಟಾರೆಯಾಗಿ ವಿದ್ಯುತ್ ಸ್ಥಾವರಗಳು ಆಪತ್ಬಾಂಧವರ ರೀತಿಯಲ್ಲಿ ಜನರಿಗೆ ನೆರವಾಗುತ್ತಿದೆ. ಶಾಖೋತ್ಪನ್ನ ಕೇಂದ್ರಗಳಿಂದ ಭಾರೀ ಪ್ರಮಾಣದ ಆಕ್ಸಿಜನ್ ಸಂಗ್ರಹ ಸಾಧ್ಯವಾಗದಿದ್ದರೂ, ಪ್ರಸ್ತುತ ಒಂದೊಂದು ಸಿಲಿಂಡರ್ ಮಹತ್ವ ಹೊಂದಿದ್ದರಿಂದ ಅಲ್ಪ ಪ್ರಮಾಣದ ಆಕ್ಸಿಜನ್ ಜನರ ಪಾಲಿಗೆ ಜೀವ ರಕ್ಷಕವಾಗಿದೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರವೂ ಕ್ಲೋರಿನೆಟೆಡ್ ತಂತ್ರಜ್ಞಾನ ಹೊಂದಿದ್ದರಿಂದ ಇಲ್ಲಿ ಆಕ್ಸಿಜನ್ ಉತ್ಪಾದನೆಗೆ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ಆಕ್ಸಿಜನ್ ಉತ್ಪಾದನೆಗೆ ಅವಕಾಶ ಇಲ್ಲ.