ವೈಜ್ಞಾನಿಕ ಮನೋಭಾವನೆಯಿಂದ ಸುಂದರ ಬದುಕು ನಿರ್ಮಾಣ

ಚಿತ್ತಾಪುರ:ಮಾ.2: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕೆ ಮನೋಭಾವನೆ ಅಳವಡಿಸಿಕೊಂಡಾಗ ಮಾತ್ರ ಬದುಕು ಸುಂದರಗೊಳ್ಳಲಿದೆ ಎಂದು ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ತಾಲೂಕು ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಮನೋಭಾವನೆ ರೂಡಿಸಿಕೊಳ್ಳುವ ಮೂಲಕ ಪ್ರಬುದ್ಧ ವಿದ್ಯಾರ್ಥಿಗಳಾಗಬೇಕು ಈ ನಿಟ್ಟಿನಲ್ಲಿ ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಕರದಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಪಂಡೀತ್ ನೆಲೋಗಿ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ವಿಜ್ಞಾನಿಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿಜ್ಞಾನ ಮನುಕುಲಕ್ಕೆ ಪೂರಕ ಮಾಡಿಕೊಳ್ಳಬೇಕು ಹೊರತು ಮಾರಕ ಮಾಡಿಕೊಳ್ಳಬಾರದು ಎಂದು ಹೇಳಿದರು. ಜೀವನದಲ್ಲಿ ಕೂತುಹಲ ಇದ್ದವರು ಏನಾದರೊಂದು ಸಾಧನೆ ಮಾಡಿದ್ದಾರೆ ಇದಕ್ಕೆ ಸಿ.ವಿ.ರಾಮನ್ ಅವರಲ್ಲಿನ ಕೂತುಹಲ ಅವರನ್ನು ನೋಬೆಲ್ ಪ್ರಶಸ್ತಿವರಗೆ ತೆಗೆದುಕೊಂಡು ಹೋಯಿತು ಎಂದರು.

ರಾಮನ್ ಬೆಳಕಿನ ಚದುರುವಿಕೆಗೆ ಜಗತ್ತಿಗೆ ಪರಿಚಯಿಸಿದ ಪ್ರಯುಕ್ತ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಾಡಲಾಗುತ್ತದೆ. ಇಂತಹ ಮಹಾನ್ ಜ್ಞಾನಿಗಳ ಜೀವನ ಚರಿತ್ರೆಯ ಪುಸ್ತಕ ಓದುವುದರಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬಹುದು ಎಂದರು. ವಿಜ್ಞಾನದಲ್ಲಿ ಜಗತ್ತು ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಸಹ ಇಂದಿಗೂ ಮೂಡನಂಬಿಕೆ, ಕಂದಾಚರ, ಜಾತೀಯತೆ ಹೆಚ್ಚಾಗಿ ಕಾಣುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಪರಿಷತ್ ತಾಲೂಕು ಅಧ್ಯಕ್ಷ ಶಾಂತಕುಮಾರ ಮಳಖೇಡ ಮಾತನಾಡಿ, ರವಿ ಕಾಣದನ್ನು ಕವಿ ಕಂಡ, ಕವಿ ಕಾಣದನ್ನು ವಿಜ್ಞಾನಿ ಕಂಡ ಎಂಬಂತೆ, ಇವತ್ತಿಗೂ ವಿಜ್ಞಾನಿಗಳು ಸಂಶೋಧನೆಯಲ್ಲಿ ಇರುವುದರಿಂದಲೇ ದೇಶ ಸಾಕಷ್ಟು ಪ್ರಗತಿಯ ಪಥದಲ್ಲಿ ಸಾಗಿದೆ, ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನಿಕ ಮನೋಭಾವನೆ ರೂಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು.

ಮುಖ್ಯಶಿಕ್ಷಕ ರಮೇಶ ಬಟಗೇರಿ, ಡಿಎಸ್‍ಎಸ್ ತಾಲೂಕು ಸಂಚಾಲಕ ಆನಂದ ಕಲ್ಲಕ್, ಪದಾಧಿಕಾರಿಗಳಾದ ಕಾಶಿನಾಥ ಗುತ್ತೇದಾರ, ರವಿಶಂಕರ ಬುರ್ಲಿ, ಶಿಕ್ಷಕರಾದ ರಂಗಣ್ಣ ದೊರೆ, ರಾಜಕುಮಾರ, ಶಿವಪ್ಪ ಶಾವಿ, ಶಾಂತೇಶ್ವರ ಭಾವಿಕಟ್ಟಿ ಇತರರು ಇದ್ದರು. ಮೋಹಿನ್ ಸಾತನೂರ ಸ್ವಾಗತಿಸಿದರು, ಕಾಶಿರಾಯ ಕಲಾಲ್ ನಿರೂಪಿಸಿದರು, ಅನಂತನಾಗ ದೇಶಪಾಂಡೆ ವಂದಿಸಿದರು.