ವೈಜ್ಞಾನಿಕ ಕೃಷಿ ಪದ್ದತಿಯಿಂದ ಭೂಮಿಯ ಅಭಿವೃದ್ಧಿ ಸಾಧ್ಯ

ಕಲಬುರಗಿ,ಜೂ.17: ಜಗತ್ತಿನ ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಕತೃವಾದ ಭೂಮಿಯು ಅನೇಕ ಕಾರಣಗಳಿಂದ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬಂಜರು, ಮರಭೂಮಿಯಾಗಿದೆ. ಮಣ್ಣು ಪರೀಕ್ಷೆ, ಬಹು ಬೆಲೆ ಪದ್ದತಿ ಅನುಸರಣೆ, ಸಾವಯುವ ಬೇಸಾಯದ ಅಳವಡಿಕೆ, ಹಸಿರು ಮತ್ತು ತಿಪ್ಪೆ ಗೊಬ್ಬರದ ಬಳಕೆ, ಮಣ್ಣಿನ ಸವಕಳಿ ತಡೆಗಟ್ಟುವಿಕೆ, ಬೀಜೋಪಚಾರ ಸೇರಿದಂತೆ ಮುಂತಾದ ವೈಜ್ಞಾನಿಕ ಕ್ರಮಗಳ ಪದ್ದತಿಯನ್ನು ರೈತರು ಅಳವಡಿಸಿಕೊಂಡು ಕೃಷಿ ಮಾಡಿದರೆ ಬಂಜರು ಭೂಮಿ ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ ಹೇಳಿದರು.
ನಗರದ ಸಮೀಪದ ಆಳಂದ ರಸ್ತೆಯ ಪಟ್ಟಣ ಕ್ರಾಸ್ ಸಮೀಪವಿರುವ ರೈತ ಗುಂಡಪ್ಪ ಅವರ ಹೊಲದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಬಂಜರು, ಮರಭೂಮಿ ಪ್ರದೇಶ ಅಭಿವೃದ್ಧಿ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಷ್ಕøತ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ ಮಾತನಾಡಿ, ಅವೈಜ್ಞಾನಿಕ ಕೃಷಿ ಪದ್ಧತಿ, ಮಣ್ಣಿನ ಸವೆತ, ಅತಿಯಾದ ದನ-ಕರುಗಳನ್ನು ಮೇಯುಸುವುದು, ಭೂ ಒತ್ತಡ, ಅತಿಯಾದ ರಾಸಾಯನಿಕಗಳ ಬಳಕೆ ಸೇರಿದಂತೆ ಮುಂತಾದ ಕಾರಣಗಳಿಂದ ಭೂಮಿಯು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಮಣ್ಣಿನ ಮೇಲ್ಪದರು ಕೊಚ್ಚಿಕೊಂಡು ಹೋಗಿ, ಅದರ ಕೆಳಗಿನ ಸ್ಥರಕ್ಕೆ ಚಲಸಿದಾಗ ಬರಡು ಮಣ್ಣು ದೊರೆತು ಬಂಜರು ಪ್ರದೇಶಗಳಾಗುತ್ತವೆ. ಆದ್ದರಿಂದ ಅರಣ್ಯಗಳ ಸಂರಕ್ಷಣೆ, ವೈಜ್ಞಾನಿಕ ಕೃಷಿ ಸೇರಿದಂತೆ ಮುಂತಾದ ಕ್ರಮಗಳನ್ನು ಅನುಸರಿಸುವದರಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶಶೀಕಲಾ ಜಿ.ಧೂಳಗೊಂಡ, ಮಲ್ಲಿಕಾರ್ಜುನ ಹಿಪ್ಪರಗಿ, ರಾಚಣ್ಣ ಧೂಳಗೊಂಡ, ನಾಗಮ್ಮ ಸರಸಂಬಿ, ಸುಧಾ ಕುಯ್ಯಾ, ಬಾಬುರಾಯ, ಕಲ್ಯಾಣಿ ಬಂಕೂರ್ ಸೇರಿದಂತೆ ಇನ್ನಿತರರಿದ್ದರು.