
ಭಾಲ್ಕಿ:ಮಾ.4: ಅಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಉತ್ತಮ ವೈಚಾರಿಕತೆಗೂ ಆದ್ಯತೆ ನೀಡಬೇಕು ಎಂದು ಸಿ.ಬಿ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ ಬಿರಾದಾರ ಅಭಿಪ್ರಾಯಪಟ್ಟರು. ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸದ್ಗುರು ವಿದ್ಯಾಲಯದ ಪುಟ್ಟ ಪುಟ್ಟ ಮಕ್ಕಳು ಸಿದ್ಧಪಡಿಸಿದ ವಸ್ತುಪ್ರದರ್ಶನ ಮತ್ತು ವಿಶ್ಲೇಷóಣೆ ಗಮನಿಸಿದರೆ ಅವರಲ್ಲಿ ಸಿ.ವಿ. ರಾಮನ್ ತರಹದ ಭವಿಷ್ಯದ ವಿಜ್ಞಾನಿಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ ಎಂದರು.
ಲೀಡ್ ಎಜುಕೇಶನ್ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ ರೆಡ್ಡಿ ಮಾತನಾಡಿ, ಮಕ್ಕಳ ಪ್ರಶ್ನೆಮಾಡುವ ಮನೋಭಾವಕ್ಕೆ ಶಿಕ್ಷಕರು ಸಮಾಧಾನದಿಂದ ಸಮರ್ಪಕ ಉತ್ತರ ನೀಡಬೇಕು. ಅಂದಾಗಲೇ ಅವರಲ್ಲಿನ ಪ್ರತಿಭೆ ಅರಳಲು ಸಾಧ್ಯವಾಗುತ್ತದೆ ಎಂದರು. ಗುರುಕುಲದ ಉಪನ್ಯಾಸಕ ಬಲಭೀಮ್ ಸುತಾರ ಮಾತನಾಡಿ, ಈಗಿನ ಮಕ್ಕಳು ಅಪ್ಡೇಟ್ ಆಗಿರುವ ಫೈವ್‍ಜಿ ತರಹ ಚುರುಕಾಗಿದ್ದಾರೆ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು.
ಸದ್ಗುರು ವಿದ್ಯಾಸಂಸ್ಥೆಯ ಸಂಸ್ಥಾಪಕ ಸೋಮನಾಥ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಸಂಯೋಜಕ ವಿಶಾಲ್, ಅಡಳಿತಾಧಿಕಾರಿ ವೀರಣ್ಣ ಪರಸಣ್ಣೆ, ಮುಖ್ಯಗುರುಮಾತೆ ಶೃತಿದೇವಿ ಸಜ್ಜನ್ ಮುಂತಾದವರು ವೇದಿಕೆಯಲ್ಲಿದ್ದರು. ಪ್ರತಿಭಾ ಪಡಸಲಗಿ ಮತ್ತು ವೀಣಾ ಬಿರಾದಾರ ನಿರ್ವಹಿಸಿದರು. ರೇಷ್ಮಾ ಬಿರಾದಾರ ಸ್ವಾಗತಿಸಿದರು. ಉಜ್ವಲಾ ಮತ್ತು ಕಾವೇರಿ ವಂದಿಸಿದರು.