ವೈಜಾನಿಕ ಮನೋಧರ್ಮದೊಂದಿಗೆ ಜ್ಞಾನವನ್ನು ವಿಸ್ತರಿಸಿಕೊಳ್ಳಿಃ ಕಡ್ಲೇವಾಡ

ವಿಜಯಪುರ, ಜ.13-ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಹೇಳುವುದು, ಕಲಿಯುವದು ಹಾಗೂ ಬರೆಯುವ ಮೂಲಕ ನಮ್ಮಲ್ಲಿ ವೈಜ್ಞಾನಿಕ ಮನೋಧರ್ಮ ಹೆಚ್ಚಿಸಿಕೊಳ್ಳಲು ಸುಲಭ ಸಾಧ್ಯವಾಗುತ್ತದೆ. ಇಂಥ ಮಹತ್ವದ ಕೆಲಸವನ್ನು ಕರ್ನಾಟಕ ವಿಜ್ಞಾನ ಪರಿಷತ್ತು ಇಂದು ರಾಜ್ಯಾದಂತ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾದ ಗಿರೀಶ ಕಡ್ಲೇವಾಡ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಗರದ ಸಿಕ್ಯಾಬ ಎ.ಆರ್.ಎಸ್.ಆಯ್ ಕಲಾ-ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಟ್ಟದ ಪದವಿ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಎ.ಎಸ್.ಪಾಟೀಲ ಅವರು ಮಾತನಾಡಿ- ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಸುವದು ಮಹತ್ವದ ಕೆಲಸವಾಗಿದೆ. ಆದರೆ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿಜ್ಞಾನ ಪಠ್ಯಕೃತಿಗಳು ಕನ್ನಡದಲ್ಲಿ ದೊರೆಯುತ್ತಿಲ್ಲ. ಇದರತ್ತ ವಿಜ್ಞಾನ ಪರಿಷತ್ತು ಗಮನ ಹರಿಸಬೇಕು. ಇದು ಆಂದೋಲನ ರೂಪದಲ್ಲಿ ಆಗಬೇಕಾದ ಕೆಲಸವಾಗಿದೆ. ಇದಕ್ಕೆ ರಾಜ್ಯದ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ನಮ್ಮ ಸಂಸ್ಥೆ ಇಂಥ ಕೆಲಸಗಳಿಗೆ ಸದಾ ಸಹಕಾರ ನೀಡುತ್ತದೆ ಎಂದು ಹೇಳಿ- ಈ ಕಾರ್ಯಕ್ರಮ ನಮ್ಮ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವುದÀಕ್ಕೆ-ವಿಜ್ಞಾನ ಪರಿಷತ್ತಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಕಲಬುರಗಿ ವಲಯದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ನಾರಾಯಣಪುರ ಅವರು ಮಾತನಾಡಿ- ವಿಜ್ಞಾನದ ಸಂಗತಿಗಳನ್ನು ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಲು ಇನ್ನು ಹಲವಾರು ಕೆಲಸಗಳಾಗಬೇಕಾಗಿದೆ. ಇಂದಿನ ಸ್ಪರ್ಧಾದಿನಗಳಲ್ಲಿ ಹೆಚ್ಚು ಭಾಷೆಗಳು ಕಲಿಯುವದು ಒಳ್ಳೆಯ ಕಾರ್ಯವೇ ಆಗಿದೆ. ಕನ್ನಡ ಉಪನ್ಯಾಸ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಕೌಶಲ್ಯ ಬೆಳೆಸಲು ಸಹಾಯವಾಗುತ್ತದೆ. ಶೈಕ್ಷಣಿಕ ವಲಯದಲ್ಲಿ ವಿಜ್ಞಾನ ಜನಪ್ರಿಯಗೊಳಿಸಲು ಇದರಿಂದ ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ ಎ.ಆರ್.ಎಸ್.ಆಯ್, ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಮಹಮ್ಮದ ಅಫ್ಜಲ್ ಅವರು ಮಾತನಾಡಿ- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕನ್ನಡ ಉಪನ್ಯಾಸ ಸ್ಪರ್ಧೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂಥ ಕಾರ್ಯಕ್ರಮಗಳು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆಯಲು ಸಹಾಯವಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ವಿಜ್ಞಾನಿಗಳ ಚರಿತ್ರೆ ಹಾಗೂ ಸಂಶೋಧನೆಗಳನ್ನ ಸರಳವಾಗಿ ತಿಳಿದುಕೊಳ್ಳಬಹುದಾಗಿದೆ. ವಿಜ್ಞಾನ ಶಿಕ್ಷಕರು, ಬರಹಗಾರರಿಗೆ ಇಂಥ ಕಾರ್ಯಕ್ರಮಗಳು ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು.
ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯಲ್ಲಿ- ಭೌತಶಾಸ್ತ್ರ ವಿಭಾಗದಲ್ಲಿ ಮಲನಬಿ ಮುಲ್ಲಾ, ಚೈತ್ರಾ ಕಬಾಡೆ. ರಸಾಯನಶಾಸ್ತ್ರ ವಿಭಾಗದಲ್ಲಿ-ಚೈತ್ರಾ ಓಲೇಕಾರ, ಸೌಂದರ್ಯ ಸಿಂದಗಿ. ಜೀವಶಾಸ್ತ್ರ ವಿಭಾಗದಲ್ಲಿ- ಶಾಹೀನ ನದಾಫ, ಪದ್ಮಾಕ್ಷಿ ಕುರೇಡಕರ. ಗಣಿತಶಾಸ್ತ್ರ ವಿಭಾಗದಲ್ಲಿ- ಪ್ರೇಮಾ ಪೂಜಾರಿ, ವಿದ್ಯಾ ಬಿರಾದಾರ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನವನ್ನು ಗಳಿಸಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ಪಡೆದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಸಿ.ಎಲ್.ಪಾಟೀಲ ಹಾಗೂ ಈ ಸಮಾರಂಭದ ಸಂಯೋಜಕರು ಮತ್ತು ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಗಿರೀಶ ಲೇಂಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಶರೀಫಾ ಅವಟಿ ಖುರಾನ್ ಪಠಣ ಮಾಡಿದರು. ಕುಮಾರಿ ಮುಸ್ಕಾನ್ ನದಾಫ ಹಾಗೂ ಗಿರಿಜಾ ಮೂಡಲಗಿ ಭಗವದ್ಗೀತೆ ವಾಚನ ಮಾಡಿದರು. ಡಾ. ಗಿರೀಶ ಲೇಂಡಿ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಮೇತ್ರಿ ಹಾಗೂ ಪ್ರೊ.ಆಯ್.ಜಿ. ಕೊಡೆಕಲ್‍ಮಠ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವಿದ್ಯಾಶ್ರೀ ಸೂರ್ಯವಂಶಿ ವಂದನಾರ್ಪಣೆ ಹೇಳಿದರು.
ಸಮಾರಂಭದಲ್ಲಿ ಸ್ಪರ್ಧೆಯ ನಿರ್ಣಾಯಕರಾಗಿ ಅಂಜುಮನ್ ಕಾಲೇಜಿನ ಪ್ರೊ. ಸೈಯದ್ ರಿಜ್ವಾನ, ಮಹಿಳಾ ವಿ.ವಿ.ಯ ಡಾ.ವೀಣಾ ಅಮ್ಮಣ್ಣ, ಪಿಡಿಜೆ ಪ.ಪೂ.ಕಾಲೇಜದ ಪ್ರೊ.ಅರುಣ ಮೋಟಗಿ, ಪ್ರೊ.ಸಂತೋಷ ಉಮರ್ಜಿ ಪಾಲ್ಗೊಂಡಿದರು. ಮಹಿಳಾ ವಿ.ವಿ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಹಾಗೂ ಡಾ.ಎಲ್.ನದಾಫ, ಪ್ರೊ.ಅಮ್ರೀನ್ ಸಭಾ, ಡಾ.ಎಸ್.ಎಚ್.ಮಲಘಾಣ, ಡಾ.ಚಿದಾನಂದ, ಡಾ.ಮುಸ್ತಾಕ ಅಹಮ್ಮದ, ಪ್ರೊ.ಎಚ್.ಕೆ.ಯಡಹಳ್ಳಿ, ಪ್ರೊ.ಎಮ್.ಟಿ.ಕೊಟ್ನಿಸ್, ಡಾ.ಎಮ್.ಎ.ಲಿಂಗಸೂರ, ಪ್ರೊ.ಎಚ್.ಎಮ್.ಖಾದ್ರಿ, ಡಾ.ಸಮಿಯುದ್ದೀನ್, ಡಾ.ಎಸ್.ಎಚ್.ಕಾಖಂಡಕಿ, ಪ್ರೊ.ಎಸ್.ಎರ್.ಬಿಜಾಪುರ, ಪ್ರೊ.ಭಾಗ್ಯಶ್ರೀ ಸೇವತ್ಕರ, ಮಂಜುಳಾ ಗಟೇಕರ್ ಮುಂತಾದವರು ಪಾಲ್ಗೊಂಡಿದ್ದರು.