ವೈಜನಾಥ ಪಾಟೀಲ್ ಸೇವೆ ಸ್ಮರಿಸದ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ,ಫೆ.25-ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಳಿಸಲು ತಮ್ಮ ಜೀವನದ ಕೊನೆಯುಸಿರಿರುವವರೆಗೂ ಹೋರಾಟ ನಡೆಸಿದ ಮಾಜಿ ಸಚಿವ ದಿ.ವೈಜನಾಥ ಪಾಟೀಲ ಅವರನ್ನು ಸ್ಮರಿಸದೆ ಕಲ್ಯಾಣ ಕರ್ನಾಟಕ ಉತ್ಸವ ನಡೆಸಿರುವುದಕ್ಕೆ ಕನ್ನಡ ಜಾಗೃತಿ ಸಮಿತಿ ಮತ್ತು ವಿಶ್ವಕರ್ಮ ಹೋರಾಟ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಈ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರ ನೇತೃತ್ವದಲ್ಲಿ ಇಂದು ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾಜಿ ಸಚಿವ ದಿ.ವೈಜನಾಥ ಪಾಟೀಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಹಾಲಿನ ಅಭಿಷೇಕ ಮತ್ತು ಎಳೆನೀರು ಅಭಿಷೇಕ ಮಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೇವೇಂದ್ರ ದೇಸಾಯಿ ಕಲ್ಲೂರ್ ಅವರು, ಮಾಜಿ ಸಚಿವ ವೈಜನಾಥ ಪಾಟೀಲ ಅವರ ಹೋರಾಟದ ಫಲವಾಗಿಯೇ ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ದೊರೆತಿದೆ. ಹಿಂದುಳಿದ ಈ ಪ್ರದೇಶದ ಅಭಿವೃದ್ಧಿಗಾಗಿ ಹೋರಾಟ ನಡೆಸಿದ ವೈಜನಾಥ ಪಾಟೀಲ ಅವರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಇಂತಹ ಮಹಾನ್ ಹೋರಾಟಗಾರರ ಸೇವೆ, ತ್ಯಾಗವನ್ನು ಸ್ಮರಿಸಲಾದರೂ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅವರ (ವೈಜನಾಥ ಪಾಟೀಲ) ಹೆಸರಿನಲ್ಲಿ ವೇದಿಕೆ ನಿರ್ಮಿಸಬೇಕಿತ್ತು. ಕನಿಷ್ಠ ಅವರ ಭಾವಚಿತ್ರಕ್ಕೆ ಪೂಜೆಯಾದರೂ ಸಲ್ಲಿಸಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಅವರ ಸೇವೆಯನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈಜನಾಥ ಪಾಟೀಲ ಅವರು ಮಾತ್ರವಲ್ಲದೆ ಮಾಜಿ ಶಾಸಕ ದಿ.ಹಣಮಂತರಾವ ದೇಸಾಯಿ, ದಿ.ಕೆ.ಬಿ.ಶಾಣಪ್ಪ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಡಾ.ರಾಜು ಕುಳಗೇರಿ, ಲಕ್ಷ್ಮಣ ದಸ್ತಿ, ಶಿವಶರಣಪ್ಪ ಖಣದಾಳ ಅವರು ಸಹ ಈ ಭಾಗದ ಅಭಿವೃದ್ಧಿಗಾಗಿ ವಿನೂತನವಾದ ಹೋರಾಟ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅವರಿಗೆ ಗೌರವ ಸಲ್ಲಿಸಬೇಕಾಗಿತ್ತು. ಆದರೆ ಈ ಭಾಗದ ಹೋರಾಟಗಾರರಿಗೆ ಉತ್ಸವದಲ್ಲಿ ಗೌರವ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕೇಶ ಶೀಲವಂತ, ಸೋಮು ಧರ್ಮಾಪೂರ, ರವಿ ನರೋಣಾ ಸೇರಿದಂತೆ ಮತ್ತಿತರರು ಇದ್ದರು.